newsics.com| ನ್ಯೂಸಿಕ್ಸ್
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೊಲ್ಲುವವರಿಗೆ 10 ಮಿಲಿಯನ್ ಡಾಲರ್ (ಸುಮಾರು ₹83 ಕೋಟಿ) ಬಹುಮಾನ ನೀಡುವುದಾಗಿ ಇರಾಕ್ನ ಸಶಸ್ತ್ರ ಗುಂಪೊಂದು ಘೋಷಿಸಿದೆ.
ತನ್ನನ್ನು ‘ಇಸ್ಲಾಮಿಕ್ ರೆಸಿಸ್ಟೆನ್ಸ್ ಇನ್ ಇರಾಕ್’ ಎಂದು ಗುರುತಿಸಿಕೊಂಡಿರುವ ಈ ಗುಂಪು ಜುಲೈ 16ರಂದು ಈ ಪ್ರಕಟಣೆ ಹೊರಡಿಸಿದೆ.
ಈ ಬಗ್ಗೆ ಇರಾನ್ನ ‘ಇರ್ನಾ’ (IRNA) ಸುದ್ದಿ ಸಂಸ್ಥೆ ಮತ್ತು ರಷ್ಯಾದ ಸರ್ಕಾರಿ ಸ್ವಾಮ್ಯದ ‘ಆರ್ಟಿ’ (RT) ವರದಿ ಉಲ್ಲೇಖಿಸಿ ‘ಇಂಡಿಯಾ ಟಿವಿ ನ್ಯೂಸ್’ ವರದಿ ಮಾಡಿದೆ.
ಹತರಾದ ಇರಾನ್ ಕಮಾಂಡರ್ಗಳ ಬಗ್ಗೆ ಟ್ರಂಪ್ ಅವರು ನೀಡಿದ ದಾರ್ಷ್ಟ್ಯದ ಮತ್ತು ಆಕ್ಷೇಪಾರ್ಹ ಹೇಳಿಕೆಗಳಿಗೆ ಪ್ರತಿಕಾರವಾಗಿ ಈ ಘೋಷಣೆ ಮಾಡಲಾಗಿದೆ ಎಂದು ಅದು ಹೇಳಿದೆ.
ಇರಾನ್ನ ಹಿರಿಯ ಕಮಾಂಡರ್ಗಳ ಸಾವಿಗೆ ಟ್ರಂಪ್ ಅವರೇ ಹೊಣೆ ಎಂದು ಆರೋಪಿಸಿರುವ ಈ ಗುಂಪು, ಸೇಡಿನ ದಾಳಿ ಮುಂದುವರಿಯಲಿದೆ ಎಂದೂ ಶಪಥ ಮಾಡಿದೆ. ಅಮೆರಿಕ, ಇರಾನ್ ಮತ್ತು ಅದರ ಮಿತ್ರ ಸಶಸ್ತ್ರ ಗುಂಪುಗಳ ನಡುವೆ ಸಂಘರ್ಷ ತೀವ್ರಗೊಂಡಿರುವ ಮಧ್ಯೆಯೇ ಈ ಪ್ರಕಟಣೆ ಹೊರಬಿದ್ದಿದೆ.
ಆದರೆ, ಈ ಬಹುಮಾನವನ್ನು ಹೇಗೆ ನೀಡಲಾಗುತ್ತದೆ ಎಂಬ ವಿಧಾನದ ಬಗ್ಗೆ ‘ಇರ್ನಾ’ ಆಗಲಿ ಅಥವಾ ‘ಆರ್ಟಿ’ ಆಗಲಿ ಹೆಚ್ಚಿನ ವಿವರ ನೀಡಿಲ್ಲ.
ಕುರಾನ್ ವಚನ ಉಲ್ಲೇಖ
ಈ ಗುಂಪು ತನ್ನ ಪ್ರಕಟಣೆಯನ್ನು, ಇಸ್ಲಾಮಿಕ್ ಪ್ರಾರ್ಥನೆಯಾದ ‘ಪರಮ ದಯಾಮಯಿ, ಕರುಣಾಮಯನೂ ಆದ ಅಲ್ಲಾಹನ ಹೆಸರಿನಲ್ಲಿ’ ಎನ್ನುವ ಸಾಲುಗಳೊಂದಿಗೆ ಪ್ರಾರಂಭಿಸಿದೆ. ಅಲ್ಲದೇ ಕುರ್ಆನ್ನ ಒಂದು ವಚನವನ್ನು ಉಲ್ಲೇಖಿಸಲಾಗಿದ್ದು, ಅದರಲ್ಲಿ ‘ ನ್ಯಾಯಯುತ ಪ್ರತಿಕಾರದಿಂದ ಮುಗ್ಧ ಜೀವಗಳನ್ನು ಉಳಿಸಬಹುದು. ಇದರಿಂದ ನೀವು ಧರ್ಮನಿಷ್ಠರಾಗಬಹುದು’ ಎಂದು ಹೇಳಲಾಗಿದೆ.
2020ರ ಜನವರಿಯಲ್ಲಿ ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನಡೆದ ಅಮೆರಿಕದ ಡ್ರೋನ್ ದಾಳಿಯಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ ಕಮಾಂಡರ್ ಜನರಲ್ ಖಾಸಿಂ ಸುಲೈಮಾನಿ ಮತ್ತು ಇರಾಕ್ ಬಂಡುಕೋರ ನಾಯಕ ಅಬು ಮಹದಿ ಅಲ್ ಮುಹಂದಿಸ್ ಹತರಾಗಿದ್ದರು.
ಈ ಘಟನೆ ಅಮೆರಿಕ, ಇರಾನ್ ಮತ್ತು ಮಧ್ಯಪ್ರಾಚ್ಯದಾದ್ಯಂತ ಇರುವ ಇರಾನ್ ಬೆಂಬಲಿತ ಸಶಸ್ತ್ರ ಗುಂಪುಗಳ ನಡುವಿನ ಉದ್ವಿಗ್ನತೆಯನ್ನು ಹೆಚ್ಚಿಸಿತ್ತು.
ಅಂದಿನಿಂದ, ಇರಾಕ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವಾರು ಇರಾನ್ ಬೆಂಬಲಿತ ಸಶಸ್ತ್ರ ಪಡೆಗಳು ಅಮೆರಿಕದ ನಾಯಕರಿಗೆ ಪದೇ ಪದೇ ಬೆದರಿಕೆಗಳನ್ನು ಹಾಕುತ್ತಿವೆ. ಸುಲೈಮಾನಿ ಮತ್ತು ಅಲ್ ಮುಹಂದಿಸ್ ಅವರ ಹತ್ಯೆಯೇ ಇದಕ್ಕೆ(ಪ್ರತಿಕಾರಕ್ಕೆ) ಪ್ರಮುಖ ಕಾರಣ ಎಂದು ಹೇಳಿಕೊಂಡಿವೆ.
ಹತರಾದ ಕಮಾಂಡರ್ಗಳನ್ನು ಟ್ರಂಪ್ ಅವರು ನಿರಂತರವಾಗಿ ಗುರಿಯಾಗಿಸುತ್ತಿರುವುದು ಅಮೆರಿಕ ಆಡಳಿತದ ‘ನೈತಿಕ ಅಧಃಪತನವನ್ನು’ ತೋರಿಸುತ್ತದೆ. ಯಾರು ಇರಾಕಿಗಳ ರಕ್ತ ಹರಿಸಿದ್ದಾರೋ, ಅವರನ್ನು ದೇಶಭ್ರಷ್ಟರನ್ನಾಗಿ ಮಾಡಿದ್ದಾರೋ, ನಮ್ಮ ಮಕ್ಕಳನ್ನು, ನಾಯಕರನ್ನು ಕೊಂದಿದ್ದಾರೋ, ಅ ಅಪರಾಧಿಯನ್ನು (ಟ್ರಂಪ್) ಈ ಜಗತ್ತಿನ ಸ್ವತಂತ್ರ ಜನರು ನೆಮ್ಮದಿಯಿಂದ ಬದುಕಲು ಬಿಡುವುದಿಲ್ಲ. ನಾವು ಅವರ ತಲೆಗೆ 10 ಮಿಲಿಯನ್ ಅಮೆರಿಕನ್ ಡಾಲರ್ ಬಹುಮಾನ ಘೋಷಿಸಿದ್ದೇವೆ ಎಂದು ಇರಾಕ್ನ ಇಸ್ಲಾಮಿಕ್ ರೆಸಿಸ್ಟೆನ್ಸ್ ಗುಡುಗಿದೆ.
ಅಪರಾಧಿ ಟ್ರಂಪ್ಗೆ ನಮ್ಮಿಂದ ಅವಮಾನದ ಹೊರತು ಬೇರೇನೂ ಸಿಗುವುದಿಲ್ಲ. ದಬ್ಬಾಳಿಕೆಯ ಕೋಟೆಗಳು ಕುಸಿದು, ಆಕ್ರಮಣಕಾರರ ಸಿಂಹಾಸನ ಉರುಳುವವರೆಗೂ ಈ ಹೋರಾಟ ಮುಂದುವರಿಯಲಿದೆ’ ಎಂದೂ ಎಚ್ಚರಿಸಿದೆ.
ಅಮೆರಿಕದ ಕನ್ಸರ್ವೇಟಿವ್ ಪಕ್ಷದ ಕಾರ್ಯಕರ್ತೆ ಲಾರಾ ಲೂಮರ್ ಈ ವರದಿಗಳನ್ನು ಟೀಕಿಸಿದ್ದಾರೆ. ‘ಟ್ರಂಪ್ ಅವರ ಹತ್ಯೆಗಾಗಿ ಇರಾಕ್ ಇಸ್ಲಾಮಿಕ್ ರೆಸಿಸ್ಟೆನ್ಸ್ ಘೋಷಿಸಿರುವ 10 ಮಿಲಿಯನ್ ಡಾಲರ್ ಬಹುಮಾನದ ಸುದ್ದಿಯನ್ನು ರಷ್ಯಾದ ಸರ್ಕಾರಿ ಮಾಧ್ಯಮಗಳು ಪ್ರಚಾರ ಮಾಡುತ್ತಿವೆ’ ಎಂದು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
Hydrogen train- Modi ಹೈಡ್ರೋಜನ್ ರೈಲು ಸಂಚಾರಕ್ಕೆ ಮೋದಿ ಚಾಲನೆ, ಈ ರೈಲಿನ ಪ್ರಯಾಣ ದರ ಟೀಗಿಂತ ಅಗ್ಗ! ವಿಡಿಯೋ ನೋಡಿ