newsics.com| ನ್ಯೂಸಿಕ್ಸ್
ದೇಶದ ನೂರಾರು ಐಷಾರಾಮಿ ಹೋಟೆಲ್‌ಗಳಿಗೆ ಸಿನಿಮೀಯ ಮಾದರಿಯಲ್ಲಿ ವಂಚಿಸುತ್ತಿದ್ದ 69 ವರ್ಷದ ವೃದ್ಧನನ್ನು ರಾಯಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ತಮಿಳುನಾಡು ಮೂಲದ ಬಿಂಗ್ಸನ್ ಜಾನ್ ಎಂದು ಗುರುತಿಸಲಾಗಿದೆ. ಈತ ಕಳೆದ ಮೂರು ದಶಕಗಳಲ್ಲಿ ದೇಶದಾದ್ಯಂತ ಸುಮಾರು 300ಕ್ಕೂ ಹೆಚ್ಚು ಪಂಚತಾರಾ ಹೋಟೆಲ್‌ಗಳಿಗೆ ವಂಚಿಸಿರೋದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ವಿಚಾರಣೆಯ ವೇಳೆ ಆರೋಪಿ ಬಿಂಗ್ಸನ್ ಜಾನ್ ನೀಡಿರುವ ಹೇಳಿಕೆ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ. ತಾನು ಕುಖ್ಯಾತ ಸರಣಿ ಹಂತಕ ಹಾಗೂ ವಂಚಕ ಚಾರ್ಲ್ಸ್ ಶೋಭರಾಜ್‌ನಿಂದ ಪ್ರೇರಣೆ ಪಡೆದಿದ್ದಾಗಿ ಒಪ್ಪಿಕೊಂಡಿದ್ದಾನೆ. ಶೋಭರಾಜ್ ಬಳಸುತ್ತಿದ್ದ ಅದೇ ರೀತಿಯ ವಂಚನೆಯ ತಂತ್ರಗಳನ್ನು ತಾನೂ ಅಳವಡಿಸಿಕೊಂಡಿದ್ದಾಗಿ ಆತ ತಿಳಿಸಿದ್ದಾನೆ.
ಮೊದಲು ಹೋಟೆಲ್ ಸಿಬ್ಬಂದಿಯ ನಂಬಿಕೆ ಗಳಿಸಲು ಬಿಂಗ್ಸನ್ ಜಾನ್ ವಿಭಿನ್ನ ವೇಷಗಳನ್ನು ಧರಿಸುತ್ತಿದ್ದ. ಕೆಲವೊಮ್ಮೆ ವಿದೇಶಿ ಪ್ರವಾಸಿ ಮಾರ್ಗದರ್ಶಿಯಾಗಿ, ಇನ್ನು ಕೆಲವೊಮ್ಮೆ ಇಂಗ್ಲಿಷ್ ಶಿಕ್ಷಕ ಅಥವಾ ಯೋಗ ತರಬೇತುದಾರನಾಗಿ ಪೋಸ್ ನೀಡುತ್ತಿದ್ದ. ಐಷಾರಾಮಿ ಸೌಲಭ್ಯಗಳನ್ನು ಪಡೆದ ನಂತರ ಬಿಲ್ ಪಾವತಿಸದೆ ಅಲ್ಲಿಂದ ಕಾಲ್ಕಿತ್ತುವುದು ಈತನ ಕಾಯಕವಾಗಿತ್ತು. ಕೆಲವು ಬಾರಿ ಹೋಟೆಲ್‌ನಲ್ಲಿದ್ದ ಬೆಲೆಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದ.
ರಾಯಪುರದ ಖ್ಯಾತ ‘ಹ್ಯಾಟ್ ಹೋಟೆಲ್’ ನೀಡಿದ ದೂರಿನ ಆಧಾರದ ಮೇಲೆ ಈತನ ಬಂಧನ ಆಗಿದೆ. ಜೂನ್ 25 ರಂದು ಹೋಟೆಲ್‌ಗೆ ಬಂದಿದ್ದ ಜಾನ್, ಜೂನ್ 27ರ ಬೆಳಗ್ಗೆ ಯಾರಿಗೂ ತಿಳಿಸದೆ ಚೆಕ್-ಔಟ್ ಮಾಡದೆ ಪರಾರಿಯಾಗಿದ್ದ. ಆತ ಪಾವತಿಸಬೇಕಿದ್ದ 63,755 ರೂಪಾಯಿ ಬಿಲ್ ಹಾಗೂ ಹೋಟೆಲ್‌ನಿಂದ ಕೇಳಿ ಪಡೆದಿದ್ದ 1.48 ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್ ಎರಡನ್ನೂ ಹೊತ್ತೊಯ್ದಿದ್ದ. ಈ ಸಂಬಂಧ ಹೋಟೆಲ್ ಮ್ಯಾನೇಜ್‌ಮೆಂಟ್ ದೂರು ನೀಡಿತ್ತು. ಬೆನ್ನಲ್ಲೇ ಪೊಲೀಸರು ಸೈಬರ್ ಸೆಲ್ ಸಹಾಯದೊಂದಿಗೆ ತನಿಖೆ ನಡೆಸಿ ಭುವನೇಶ್ವರದಲ್ಲಿ ಈತನನ್ನು ಬಂಧಿಸಿದ್ದಾರೆ.