newsics.com|ನ್ಯೂಸಿಕ್ಸ್
ಇಂದು ಕಾರ್ಪೊರೇಟ್ ಉದ್ಯಮದಲ್ಲಿ ನಾನಾ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಅನೇಕ ಉದ್ಯೋಗಿಗಳಿದ್ದಾರೆ. ಇದೀಗ ಮದುವೆಗೆ ರಜೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಆತ ಕಂಪನಿಯ ಸಿಇಒಗೆ ರಾಜೀನಾಮೆ ಪತ್ರ ಬರೆದಿದ್ದು ಇದರಲ್ಲಿ ಬರೆದಿರುವ ಸಾಲುಗಳು ಮಾತ್ರ ಎಲ್ಲರನ್ನು ಅಚ್ಚರಿ ಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಿ ರಾಜೀನಾಮೆ ಇಮೇಲ್ ಅನ್ನು ಶೇರ್ ಮಾಡಿದ್ದಾರೆ. ಕಂಪನಿಯೂ ಪ್ರಾಜೆಕ್ಟ್ ನ ಕೆಲಸದಲ್ಲಿ ತುರ್ತು ಪರಿಸ್ಥಿತಿಯಲ್ಲಿದೆ ಎಂಬ ಕಾರಣಕ್ಕೆ ರಜೆಯನ್ನು ತಿರಸ್ಕಾರ ಮಾಡಿತ್ತು. ಅಷ್ಟೇ ಅಲ್ಲದೆ ಮದುವೆಗೆ ಹೋಗುವ ಬದಲು ಗೂಗಲ್ ಮೀಟ್ ನಲ್ಲಿ ಭಾಗವಹಿಸಿ ಎಂದು ಸಲಹೆಯನ್ನು ನೀಡಲಾಗಿತ್ತು. ಮದುವೆಗೆ ರಜೆ ವಿನಂತಿಯನ್ನು ಕಂಪನಿ ತಿರಸ್ಕರಿಸಿದ ನಂತರ ಉದ್ಯೋಗಿ ತ್ಯಜಿಸಲು ನಿರ್ಧರಿಸಿದ್ದಾರೆ.
ಸಿಇಒ ಅವರ ಈ ಸಲಹೆಗೆ ಬೇಸತ್ತ ಉದ್ಯೋಗಿ, ನೇರವಾಗಿ ಸಿಇಒಗೆ ರಾಜೀನಾಮೆ ಇಮೇಲ್ ಕಳುಹಿಸಿದ್ದಾರೆ. ಮೊದಲಿಗೆ, ಇಮೇಲ್ ಸಾಮಾನ್ಯ ರಾಜೀನಾಮೆಯಂತೆ ಕಂಡುಬಂದಿತು. ಆದರೆ ಕೊನೆಯ ಸಾಲು ಮಾತ್ರ ಎಲ್ಲರನ್ನು ಅಚ್ಚರಿ ಪಡಿಸಿದೆ. ಸಿಇಒಗೆ ಕಳುಹಿಸಿದ ಇಮೇಲ್‌ನಲ್ಲಿ, ಉದ್ಯೋಗಿ ಹೀಗೆ ಬರೆದಿದ್ದಾರೆ, “ಪ್ರಿಯ ಶ್ರೀ ಅರ್ಜುನ್ , ದಯವಿಟ್ಟು ಇದನ್ನು ನನ್ನ ಔಪಚಾರಿಕ ರಾಜೀನಾಮೆಯಾಗಿ ಸ್ವೀಕಾರ ಮಾಡಿ, ಯೋಜನೆಯು ಆದ್ಯತೆಯಾಗಿದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮತ್ತು ನನ್ನ ರಜೆ ವಿನಂತಿಯನ್ನು ನಿರಾಕರಿಸಿದ ನಿರ್ಧಾರವನ್ನು ಅತೀಯಾಗಿ ಗೌರವಿಸುತ್ತೇನೆ. ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತಾ ಗೂಗಲ್ ಮೀಟ್ ಮೂಲಕ ಮದುವೆಗೆ ಹಾಜರಾಗುವ ನಿಮ್ಮ ಸಲಹೆಯನ್ನು ನಾನು ಸಹ ಅಂಗೀಕರಿಸುತ್ತೇನೆ.
ಆದರೆ ದುರದೃಷ್ಟವಶಾತ್, ಅದು ಸಾಧ್ಯವಿಲ್ಲ,ಯಾಕೆಂದರೆ ಈ ಮದುವೆಯ ಮದುಮಗ ನಾನೇ ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಉದ್ಯೋಗಿ ಮದುವೆಯಾಗುತ್ತಿರುವಾಗ ವ್ಯವಸ್ಥಾಪಕರು ವಿಚಾರಿಸಬೇಕಲ್ಲವೆ? ಇಂತಹ ರಜೆ ವಿನಂತಿಯನ್ನು ತಿರಸ್ಕರಿಸುವುದು ಸಮಂಜಸವೇ ಎಂದು ಸಿಇಒ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಗೂಗಲ್ ಮೀಟ್ ಲಿಂಕ್ ಕಳುಹಿಸಿ ಮದುವೆ ಆಗಿ ಅನ್ನೋದು ಈ ಶತಮಾನದ ಒಂದು ಒಂದು ದೊಡ್ಡ ಸಾಧನೆ ಎಂದು ಟೀಕೆ ಮಾಡಿದ್ದಾರೆ..