newsics.com|ನ್ಯೂಸಿಕ್ಸ್
ದೇಶದ ರಾಜಧಾನಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಮತ್ತು ಹಸಿರು ಸಾರಿಗೆಯನ್ನು ಉತ್ತೇಜಿಸಲು ದೆಹಲಿ ಸರ್ಕಾರವು ಮಹತ್ವದ ಹೆಜ್ಜೆ ಇಡಲಾಗಿದ್ದು, ಹೊಸ ಎಲೆಕ್ಟ್ರಿಕ್ ವಾಹನ ನೀತಿಗೆ ಸರ್ಕಾರ ಅಧಿಕೃತ ಅನುಮೋದನೆ ನೀಡಿದೆ., ಇವಿ ಗ್ರಾಹಕರಿಗೆ ಬಂಪರ್ ಸಬ್ಸಿಡಿ ಹಾಗೂ ರಸ್ತೆ ತೆರಿಗೆ ವಿನಾಯಿತಿಗಳನ್ನು ಪ್ರಕಟಿಸಿದೆ.
30 ಲಕ್ಷ ರೂ.ವರೆಗಿನ ಎಲೆಕ್ಟ್ರಿಕ್ ಕಾರುಗಳಿಗೆ ರಸ್ತೆ ತೆರಿಗೆ ಮತ್ತು ನೋಂದಣಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ಆದರೆ ಇಂಧನ ಮತ್ತು ಎಲೆಕ್ಟ್ರಿಕ್‌ನಿಂದ ಚಲಿಸುವ ಹೈಬ್ರಿಡ್ ವಾಹನಗಳಿಗೆ ಯಾವುದೇ ಸಬ್ಸಿಡಿ ಇರುವುದಿಲ್ಲ, ಕೇವಲ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.
ಇದರೊಂದಿಗೆ ಮುಂದಿನ ಕೆಲವು ವರ್ಷಗಳಲ್ಲಿ ಪೆಟ್ರೋಲ್ ಮತ್ತು ಸಿಎನ್‌ಜಿ ದ್ವಿಚಕ್ರ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ಸಂಪೂರ್ಣ ಎಲೆಕ್ಟ್ರಿಕ್ ವಾಹನಗಳನ್ನೇ ರಸ್ತೆಗಿಳಿಸುವ ದೃಢ ಸಂಕಲ್ಪವನ್ನು ಸರ್ಕಾರ ಮಾಡಿದೆ.
ದೆಹಲಿಯಲ್ಲಿ ವಾಯು ಮಾಲಿನ್ಯ ತಗ್ಗಿಸಲು ಈಗಿನಿಂದಲೇ ಪ್ರಯತ್ನ ಮಾಡಲಾಗುತ್ತದೆ. ಚಳಿಗಾಲ ಆರಂಭಗೊಳ್ಳುತ್ತಿದ್ದಂತೆ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗುತ್ತದೆ. ಹೀಗಾಗಿ ಅಕ್ಟೋಬರ್ ತಿಂಗಳಿನಿಂದ ದೆಹಲಿಯಲ್ಲಿ ಗಣನೀಯವಾಗಿ ವಾಯು ಮಾಲಿನ್ಯ ತಗ್ಗಿಸಲು ಇವಿ ವಾಹನಗಳಿಗೆ ಒತ್ತು ನೀಡಲಾಗುತ್ತದೆ. ಜೊತೆಗೆ ತೈಲ ಅವಲಂಬನೆಯೂ ಕಡಿಮೆಯಾಗಲಿದೆ. ಮುಂದಿನ ನಾಲ್ಕು ವರ್ಷಗಳಲ್ಲಿ ದೆಹಲಿ ಸರ್ಕಾರ ಇವಿ ಪಾಲಿಸಿಗಾಗಿ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ಈ ಪೈಕಿ 7,000 ಕೋಟಿ ರೂಪಾಯಿಗಳನ್ನು ಸಬ್ಸಿಡಿಗಳಿಗೆ ನೀಡಲಾಗುತ್ತದೆ. ಇನ್ನುಳಿದ 8000 ರೂಪಾಯಿ ಮೊತ್ತವನ್ನು ಇವಿ ಮೂಲಭೂತ ಸೌಕರ್ಯ ಹೆಚ್ಚಿಸಲು ನೀಡಲಾಗುತ್ತದೆ. ದೆಹಲಿಯಲ್ಲಿ 32000 ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಸ್ಟೇಶನ್ ಅಳವಡಿಕೆ ಕಾರ್ಯಗಳು ಪ್ರಗತಿಯಲ್ಲಿದೆ ಎಂದು ರೇಖಾ ಗುಪ್ತ ಹೇಳಿದ್ದಾರೆ.