newsics.com | ನ್ಯೂಸಿಕ್ಸ್
ಕೆ.ಆರ್.ಪೇಟೆ(ಮಂಡ್ಯ): ಕೆ.ಆರ್.ಪೇಟೆಯ ಜೆಡಿಎಸ್ ಶಾಸಕ ಹೆಚ್.ಟಿ. ಮಂಜು ಅವರ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಭಾರಿ ನೂಕುನುಗ್ಗಲು ಉಂಟಾಗಿದ್ದು, ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಾಸಕರ ಅಭಿಮಾನಿಗಳು ಕೆ.ಆರ್.ಪೇಟೆಯಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ಬಂದಿದ್ದ ಸಾರ್ವಜನಿಕರಿಗೆ ಮಟನ್ ಊಟ (ಬಾಡೂಟ) ಹಾಗೂ ಮಹಿಳೆಯರಿಗೆ ಉಚಿತ ಸೀರೆಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು.
ಸಾವಿರಾರು ಜನರು ಒಂದೇ ಬಾರಿಗೆ ಮಟನ್ ಊಟ ಮತ್ತು ಸೀರೆ ಪಡೆಯಲು ಮುಗಿಬಿದ್ದಿದ್ದರಿಂದ ಸ್ಥಳದಲ್ಲಿ ತೀವ್ರ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕಾರ್ಯಕ್ರಮದಲ್ಲಿ ಸೂಕ್ತ ಜನದಟ್ಟಣೆ ನಿಯಂತ್ರಣ ಹಾಗೂ ಮುನ್ನೆಚ್ಚರಿಕೆ ಕ್ರಮಗಳ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ಪರಿಣಾಮವಾಗಿ ಉಂಟಾದ ನೂಕುನುಗ್ಗಲಿನಲ್ಲಿ ಸಿಲುಕಿ ಐದು ಮಂದಿಯ ಕೈ ಮತ್ತು ಕಾಲುಗಳು ಮುರಿದಿವೆ.
ಘಟನೆಯಲ್ಲಿ ಗಾಯಗೊಂಡವರನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆ ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಸದ್ಯ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.