Newsics.com
ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಈಥಾ’ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಮಹಾರಾಷ್ಟ್ರದ ಪ್ರಸಿದ್ಧ ಲಾವಣಿ ಕಲಾವಿದೆ ವಿಠಾಬಾಯಿ ನಾರಾಯಣಗಾಂವ್ಕರ್ ಅವರ ಜೀವನವನ್ನು ಆಧರಿಸಿದ ಈ ಚಿತ್ರದಲ್ಲಿ ಶ್ರದ್ಧಾ ಕಪೂರ್ ಸಂಪೂರ್ಣ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ಟೀಸರ್‌ನಲ್ಲಿ ಶ್ರದ್ಧಾ ಕಪೂರ್ ಅವರ ಅದ್ಭುತ ರೂಪಾಂತರ ಗಮನ ಸೆಳೆದಿದ್ದು, ಗರ್ಭಿಣಿಯಾಗಿದ್ದರೂ ವೇದಿಕೆಯಲ್ಲಿ ಕಲಾಪ್ರದರ್ಶನ ನೀಡುವ ವಿಠಾಬಾಯಿ ಅವರ ಹೋರಾಟ ಮತ್ತು ಕಲಾಸೇವೆಯನ್ನು ಭಾವನಾತ್ಮಕವಾಗಿ ಚಿತ್ರಿಸಲಾಗಿದೆ. ಈ ದೃಶ್ಯಗಳು ಸಿನಿಪ್ರೇಮಿಗಳಲ್ಲಿ ಕುತೂಹಲ ಹೆಚ್ಚಿಸಿವೆ.
ಚಿತ್ರವು ಮರಾಠಿ ಜನಪದ ಕಲೆಗಳಾದ ಲಾವಣಿ ಮತ್ತು ತಮಾಷಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ ವಿಠಾಬಾಯಿ ಅವರ ಬದುಕಿನ ಹೋರಾಟ, ಸಾಧನೆ ಮತ್ತು ಕಲಾಪ್ರೇಮವನ್ನು ತೆರೆ ಮೇಲೆ ತರುತ್ತಿದೆ. ಟೀಸರ್ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಶ್ರದ್ಧಾ ಅಭಿನಯಕ್ಕೆ ಪ್ರಶಂಸೆಗಳ ಮಹಾಪೂರವೇ ಹರಿದುಬಂದಿದೆ.
‘ಈಥಾ’ ಚಿತ್ರವನ್ನು ನಿರ್ದೇಶಕ ಲಕ್ಷ್ಮಣ ಉತ್ತೇಕರ್ ನಿರ್ದೇಶಿಸುತ್ತಿದ್ದು, ಶ್ರದ್ಧಾ ಕಪೂರ್ ಅವರ ವೃತ್ತಿಜೀವನದ ಅತ್ಯಂತ ಸವಾಲಿನ ಹಾಗೂ ವಿಭಿನ್ನ ಪಾತ್ರಗಳಲ್ಲಿ ಇದೂ ಒಂದೆಂದು ಚಿತ್ರರಂಗದಲ್ಲಿ ಚರ್ಚೆಯಾಗುತ್ತಿದೆ.