newsics.com/ನ್ಯೂಸಿಕ್ಸ್
ಕೊಡಗು ಜಿಲ್ಲೆಯ ದುಬಾರೆಯಲ್ಲಿನ ಸಾಕಾನೆ ಶಿಬಿರದಲ್ಲಿ ಸೋಮವಾರ ಅನಾಹುತ ನಡೆದಿದೆ. ಸಾಕಾನೆಗಳ ಕಾಳಗದ ನಡುವೆ ಸಿಕ್ಕಿ ಹಾಕೊಂಡ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಅವರನ್ನು ರಕ್ಷಣೆ ಮಾಡಲು ಪ್ರಯತ್ನ ನಡೆಸಿದರೂ ಅದು ಸಾಧ್ಯವಾಗಿಲ್ಲ.
ಈ ಘಟನೆಯ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆಯು ಶಿಬಿರಕ್ಕೆ ಪ್ರವಾಸಿಗರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದೆ. ಇಂದು ಮತ್ತು ನಾಳೆ (ಮಂಗಳವಾರ ಮತ್ತು ಬುಧವಾರ) ಪ್ರವಾಸಿಗರಿಗೆ ದುಬಾರೆ ಶಿಬಿರಕ್ಕೆ ಭೇಟಿ ನೀಡಲು ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಆನೆಗಳ ನಡುವಿನ ಜಗಳದಿಂದಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವುದರಿಂದ, ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕಾವೇರಿ ನದಿ ದಾಟಿಸಿ ಪ್ರವಾಸಿಗರನ್ನು ಶಿಬಿರಕ್ಕೆ ಕರೆದೊಯ್ಯುವ ಬೋಟಿಂಗ್ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗಿದ್ದು, ನದಿ ತೀರದವರೆಗೂ ಬರದಂತೆ ಪ್ರವಾಸಿಗರಿಗೆ ಸೂಚನೆ ನೀಡಲಾಗಿದೆ.
ನಿನ್ನೆ ನಡೆದ ಕಾದಾಟದಲ್ಲಿ ‘ಮಾರ್ತಾಂಡ’ ಆನೆಯು ‘ಕಂಜನ್’ ಆನೆಯ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿದೆ. ಮಾರ್ತಾಂಡನ ಹೊಟ್ಟೆಯ ಭಾಗ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ಆಳವಾದ ಗಾಯಗಳಾಗಿವೆ. ಸದ್ಯ ದುಬಾರೆ ಶಿಬಿರದಲ್ಲೇ ಮಾರ್ತಾಂಡನಿಗೆ ಅರಣ್ಯ ಇಲಾಖೆಯ ಪಶುವೈದ್ಯರಾದ ಡಾ. ಮುಜೀಬ್ ಅವರ ನೇತೃತ್ವದ ತಂಡ ಚಿಕಿತ್ಸೆ ನೀಡುತ್ತಿದೆ. ಆನೆಯ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದೆ ಎಂದು ತಿಳಿದುಬಂದಿದೆ.