ತಮಿಳುನಾಡಿನಲ್ಲಿ ನಟ ವಿಜಯ್ ಗೆಲುವು, ಹೊಸ ಸರ್ಕಾರ ರಚನೆ ಬಗ್ಗೆ ಸೂಪರ್ ಸ್ಟಾರ್ ರಜನಿಕಾಂತ್ ಮಾತನಾಡಿದ್ದಾರೆ. ಒಂದಷ್ಟು ವದಂತಿಗಳ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ವಿಜಯ್ ನೇತೃತ್ವದ ಹೊಸ ಸರ್ಕಾರಕ್ಕೆ ಅಭಿನಂದನೆ ತಿಳಿಸಿದ್ದು ಉತ್ತಮವಾಗಿ ಜನರ ಸೇವೆ ಮಾಡಲಿ ಎಂದು ಶುಭ ಹಾರೈಸಿದ್ದಾರೆ. ತಮ್ಮ ನಿವಾಸದ ಬಳಿಯೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ.
ಸ್ಟಾಲಿನ್ ಸೋಲಿನ ಬಗ್ಗೆ ರಜನಿಕಾಂತ್ ಮೊದಲಿಗೆ ಮಾತನಾಡಿದ್ದಾರೆ. ನನ್ನ ಬಹಳ ವರ್ಷಗಳ ಸ್ನೇಹಿತರು ಸ್ಟಾಲಿನ್. ತಮ್ಮದೇ ಕ್ಷೇತ್ರದಲ್ಲಿ ಅವರು ಸೋಲುಂಡಿದ್ದು ಬೇಸರ ತಂದಿತ್ತು. ಹಾಗಾಗಿ ನಾನು ಹೋಗಿ ಅವರನ್ನು ಭೇಟಿ ಮಾಡಿ ಮಾತನಾಡಿಸಿದ್ದೆ. ಆದರೆ ಅದಕ್ಕೆ ಬೇರೆಯದ್ದೇ ಬಣ್ಣ ಬಳಿದರು. ವಿಜಯ್ ಸರ್ಕಾರ ರಚಿಸಬಾರದು, ಡಿಎಂಕೆ ಹಾಗೂ ಎಡಿಎಂಕೆ ಪಕ್ಷಗಳು ಸೇರಿ ಸರ್ಕಾರ ರಚನೆಗೆ ನಾನು ಸೂತ್ರಧಾರನಾಗಿದ್ದೇನೆ ಎಂದು ಚರ್ಚೆ ನಡೀತು. ಅದೆಲ್ಲಾ ಶುದ್ಧ ಸುಳ್ಳು, ಅಂತಹ ಕೆಲಸ ಮಾಡುವ ವ್ಯಕ್ತಿ ರಜನಿಕಾಂತ್ ಅಲ್ಲ ಎಂದಿದ್ದಾರೆ.
ಇತ್ತೀಚೆಗೆ ವಿಮಾನ ನಿಲ್ದಾಣದಲ್ಲಿ ರಜನಿಕಾಂತ್ ಅವರನ್ನು ಮಾಧ್ಯಮದವರು ಮಾತನಾಡಿಸುವ ಪ್ರಯತ್ನ ಮಾಡಿದ್ದರು. ವಿಜಯ್ ಗೆಲುವಿನ ಬಗ್ಗೆ ಕೇಳುತ್ತಿದ್ದಂತೆ ಪ್ರತಿಕ್ರಿಯಿಸದೇ ಹೊರಟು ಹೋಗಿದ್ದರು. ಈ ಬಗ್ಗೆ ಕೆಲವರು ಟೀಕಿಸಿ ಏನೇನೊ ಕಾಮೆಂಟ್ ಮಾಡಿದ್ದರು. ಅದಕ್ಕೂ ರಜನಿಕಾಂತ್ ಉತ್ತರ ನೀಡಿದ್ದಾರೆ. ವಿಜಯ್ ಗೆಲ್ಲುತ್ತಿದ್ದಂತೆ ಮೊದಲಿಗೆ ಟ್ವೀಟ್ ಮಾಡಿ ಅಭಿನಂದನೆ ತಿಳಿಸಿದವನು ನಾನು. ವಿಮಾನ ನಿಲ್ದಾಣದಲ್ಲಿ ಯಾರೋ ಮೊಬೈಲ್ ಹಿಡಿದು ಪ್ರಶ್ನೆ ಹೇಳಿದ್ರು, ನಾನು ಮಾಧ್ಯಮದವರು ಅಲ್ಲ ಎಂದುಕೊಂಡು ನಕ್ಕು ಹೋಗಿದ್ದೆ. ಅದಕ್ಕೆ ಏನೇನೊ ಕಾಮೆಂಟ್ ಮಾಡಿದ್ರು ಎಂದು ರಜನಿಕಾಂತ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಜಯ್ ಗೆಲುವು ಕಂಡು ನನಗೆ ಅಸೂಯೆ ಎನ್ನುತ್ತಾರೆ. ನಾನು ರಾಜಕೀಯಕ್ಕೆ ಬರ್ತೀನಿ ಎಂದು ಹೇಳಿ ಬಳಿಕ ನಿರ್ಧಾರ ಬದಲಿಸಿದೆ. ಹಾಗಿದ್ದ ಮೇಲೆ ವಿಜಯ್ ಬಗ್ಗೆ ನನಗೆ ಯಾಕೆ ಅಸೂಯೆ ಎಂದು ರಜನಿಕಾಂತ್ ಪ್ರಶ್ನಿಸಿದ್ದಾರೆ. ಒಂದು ವೇಳೆ ಕಮಲ್ ಹಾಸನ್ ಸಿಎಂ ಆಗಿದ್ದರೆ ನನಗೆ ಅಸೂಯೆ ಆಗುತ್ತಿತ್ತೋ ಏನೋ ಗೊತ್ತಿಲ್ಲ ಎಂದು ತಮಾಷೆಯಾಗಿ ನಕ್ಕಿದ್ದಾರೆ. ಆಗ ಕೂಡ ಅಸೂಯೆ ಇರುತ್ತಿರಲಿಲ್ಲ, ಸಿಗುವುದು ಸಿಗದೇ ಇರಲ್ಲ, ಸಿಗದೇ ಇರುವುದು ಏನೇ ಮಾಡಿದ್ರು ಸಿಗಲ್ಲ ಎಂದು ತಮ್ಮ ಶೈಲಿಯಲ್ಲಿ ರಜನಿಕಾಂತ್ ಹೇಳಿದ್ದಾರೆ.
ನನಗೂ ವಿಜಯ್ಗೂ ಜನರೇಷನ್ ಗ್ಯಾಪ್ ಇದೆ. ಹೆಚ್ಚು ಕಮ್ಮಿ 24 ವರ್ಷಗಳ ವ್ಯತ್ಯಾಸ. ನಮ್ಮಿಬ್ಬರನ್ನು ಹೋಲಿಸಿಕೊಂಡರೆ ನನಗೆ ಕೆಟ್ಟ ಹೆಸರು. ಅವ್ರು ನನ್ನ ಜೊತೆ ಹೋಲಿಸಿಕೊಂಡರೆ ಅವರಿಗೂ ಸರಿಯಲ್ಲ. ಚಿಕ್ಕಂದಿನಿಂದ ಅವರನ್ನು ನೋಡುತ್ತಿದ್ದೇನೆ. ಕೇವಲ 52 ವರ್ಷ ವಯಸ್ಸಿನಲ್ಲಿ ಎನ್ಟಿಆರ್, ಎಂಜಿಆರ್ ಅವರಿಗಿಂತ ವಿಜಯ್ ದೊಡ್ಡ ಸಾಧನೆ ಮಾಡಿದ್ದಾರೆ. ಕೇಂದ್ರದಲ್ಲಿ ಬಿಜೆಪಿ, ಇಲ್ಲಿ ಎರಡು ದೊಡ್ಡ ಪಕ್ಷಗಳನ್ನು ಎದುರಿಸಿ ಏಕಾಂಗಿಯಾಗಿ ವಿಜಯ್ ಗೆದ್ದಿದ್ದಾರೆ. ನನಗೆ ಈ ಬಗ್ಗೆ ಅಸೂಯೆ ಇಲ್ಲ. ನಿಜಕ್ಕೂ ಅವರ ಸಾಧನೆಯನ್ನು ಮೆಚ್ಚಲೇಬೇಕು. ಅವರಿಗೆ ಶುಭವಾಗಲಿ ಎಂದು ರಜನಿಕಾಂತ್ ವಿವರಿಸಿದ್ದಾರೆ.
https://x.com/MilagroMovies/status/2055892309095620684?s=20
ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಚಿನ್ನ-ಬೆಳ್ಳಿ, ಇಂಧನ ಮಾರಾಟ ಭಾರಿ ಕುಸಿತ!