newsics.com/ನ್ಯೂಸಿಕ್ಸ್
ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟದಲ್ಲಿ ಮತ್ತೊಂದು ನರಭಕ್ಷಕ ಚಿರತೆ ದಾಳಿ ಮಾಡಿದ್ದು, ಚಿರತೆ ದಾಳಿಗೆ ೮ ವರ್ಷದ ಬಾಲಕ ಬಲಿಯಾಗಿದ್ದಾನೆ. ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಪೋಷಕರೊಂದಿಗೆ ಪಾದಯಾತ್ರೆ ತೆರಳುತ್ತಿದ್ದ ಬಾಲಕ ಚಿರತೆ ದಾಳಿಯಲ್ಲಿ ಬಲಿಯಾಗಿದ್ದಾನೆ.
ಹರ್ಷಿತ್ ತನ್ನ ಪೋಷಕರೊಂದಿಗೆ ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆಗೆ ಪಾದಯಾತ್ರೆ ತೆರಳುತ್ತಿದ್ದ. ಇಂದು ಮುಂಜಾನೆ ಸುಮಾರು 7 ಗಂಟೆಯ ವೇಳೆಗೆ ದಟ್ಟ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ, ಪೊದೆಯಲ್ಲಿ ಹೊಂಚು ಹಾಕಿದ್ದ ಚಿರತೆ ಕ್ಷಣಾರ್ಧದಲ್ಲಿ ಬಾಲಕನ ಮೇಲೆ ದಾಳಿ ಮಾಡಿ ಕಾಡಿನೊಳಗೆ ಎಳೆದೊಯ್ದಿದೆ.
ಕುಟುಂಬಸ್ಥರು ಕಿರುಚಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ನಂತರ ಬಾಲಕನ ಮೃತದೇಹ ಪತ್ತೆಯಾಗಿದ್ದು, ಚಿರತೆಯು ಬಾಲಕನನ್ನು ಕೊಂದು ತಿಂದು ತೇಗಿದೆ. ದೇಹದ ಕೆಲವು ಭಾಗಗಳನ್ನು ಭಕ್ಷಿಸಿರುವುದು ಕಂಡುಬಂದಿದೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಮತ್ತು ಮಲೆ ಮಹದೇಶ್ವರ ಬೆಟ್ಟದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಪಾದಯಾತ್ರೆ ಕೈಗೊಳ್ಳುವ ಯಾತ್ರಿಕರಲ್ಲಿ ಭೀತಿ ಹುಟ್ಟಿಸಿದೆ.