newsics.com/ನ್ಯೂಸಿಕ್ಸ್
ಹೈದರಾಬಾದ್: ಇತ್ತೀಚೆಗೆ ಹೈದರಾಬಾದ್ ಪಾಲಿಕೆ ವ್ಯಾಪ್ತಿಯ ಮಲಕಾಜ್‌ಗಿರಿಯ ನೂತನ ಪೊಲೀಸ್ ಕಮಿಷನರ್ ಬಿ. ಸುಮತಿ ಅವರು ವೇಷ ಮರೆಸಿಕೊಂಡು ರಾತ್ರಿ ಹೊತ್ತು ಒಬ್ಬಂಟಿಯಾಗಿ ಅಂಡರ್ ಕವರ್ ಆಪರೆಷನ್‌ಗೆ ಇಳಿದಿದ್ದರು.
ಮಧ್ಯರಾತ್ರಿ 12ರ ಸುಮಾರು ಮಲಕಾಜ್‌ಗಿರಿ ವ್ಯಾಪ್ತಿಯ ದಿಲ್‌ಸುಖ್‌ನಗರದಲ್ಲಿ ಕಾನೂನು–ಸುವ್ಯವಸ್ಥೆ ಹೇಗಿದೆ? ಎಂಬುದರ ಬಗ್ಗೆ ತಾವೊಬ್ಬರೇ ಪೊಲೀಸ್ ಸಮವಸ್ತ್ರ ತೆಗೆದಿರಿಸಿ, ಚೂಡಿದಾರ್ ಧರಿಸಿ ತಾವೊಬ್ಬರೇ ಕಾರ್ಯಾಚರಣೆ ಕೈಗೊಂಡಿದ್ದರು.
ಸುಮಾರು 2 ಗಂಟೆ ನಗರದಲ್ಲಿ ತಾವೊಬ್ಬರೇ ಸಾಮಾನ್ಯ ಮಹಿಳೆಯ ರೀತಿ ಸಂಚರಿಸಿದ್ದಾರೆ. ಆದರೆ, ಈ ವೇಳೆ ಸುಮತಿ ಅವರಿಗಾದ ಅನುಭವದಿಂದ ಹೈದರಾಬಾದ್ ಮಹಿಳೆಯರು ಬೆಚ್ಚಿಬಿದ್ದಿದ್ದಾರೆ.
ಕಾರ್ಯಾಚರಣೆ ವೇಳೆ ಸುಮತಿ ಅವರನ್ನು ಕಂಡು ಕೆಲ ಯುವಕರು, ಮಧ್ಯವಯಸ್ಕ ವ್ಯಕ್ತಿಗಳು, ಮುದುಕರು ಅಸಭ್ಯವಾಗಿ ನಡೆದುಕೊಂಡಿದ್ದಾರೆ. ಇನ್ನೂ ಕೆಲ ಯುವಕರಂತು ಬೈಕ್‌ನಲ್ಲಿ ಹೋಗುವಾಗ ಸುಮತಿ ಬಳಿ ಬೈಕ್ ನಿಲ್ಲಿಸಿ ಬರ್ತಿಯಾ ಎಂದು ಕೇಳಿದ್ದಾರೆ.
ಕ್ರಮೇಣ ಗಂಟೆ ಕಳೆದ ಹಾಗೇ ರೋಸಿಹೋದ ಸುಮತಿ ಅವರು ತಮ್ಮ ಅಧೀನ ಅಧಿಕಾರಿಗಳಿಗೆ ಸ್ಥಳಕ್ಕೆ ದೌಡಾಯಿಸಲು ಎಚ್ಚರಿಕೆ ನೀಡಿದರು. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಸುಮತಿ ಅವರನ್ನು ಕಂಡು ಕಕ್ಕಾಬಿಕ್ಕಿಯಾಗಿದ್ದಾರೆ.
ಆದರೆ, ಧೃತಿಗೆಡದ ಅವರು, ಅಲ್ಲಿಯೇ ಪೊಲೀಸರೊಂದಿಗೆ ಸಭೆ ನಡೆಸಿ, ಮಹಿಳೆಯರ ಸುರಕ್ಷತೆಯ ಪಾಠ ಮಾಡಿದ್ದಾರೆ. ಮಾರನೇ ದಿನ ನಡೆದ ಸುದ್ದಿಗೋಷ್ಟಿಯಲ್ಲಿ ಕಮಿಷನರ್ ತಮ್ಮ ಅಂಡರ್ ಕವರ್ ಆಫರೇಷನ್ ಬಗ್ಗೆ ಹೇಳಿ ಪತ್ರಕರ್ತರೂ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಕಾರ್ಯಾಚರಣೆಯಲ್ಲಿ ಅಸಭ್ಯವಾಗಿ ವರ್ತಿಸಿರುವ ಕೆಲ ಯುವಕರನ್ನು ಗುರುತಿಸಿ ಕ್ರಮ ಕೈಗೊಳ್ಳಲು ಅಧೀನ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.
https://www.newsics.com/2026/05/07/now-you-can-recharge-your-mobile-through-whatsapp/