newsics.com/ನ್ಯೂಸಿಕ್ಸ್
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಈ ಬಾರಿ ದೊಡ್ಡ ರಾಜಕೀಯ ಬದಲಾವಣೆಗೆ ವೇದಿಕೆ ತಯಾರಿಸಿದೆ. ಮತ ಎಣಿಕೆ ಪ್ರವೃತ್ತಿಗಳ ಪ್ರಕಾರ, ಬಿಜೆಪಿ ಪಕ್ಷ ರಾಜ್ಯದಲ್ಲಿ ಅಭೂತಪೂರ್ವ ಮುನ್ನಡೆ ಸಾಧಿಸಿರುವುದು ಸ್ಪಷ್ಟವಾಗಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಬಿಜೆಪಿ ಪೈಪೋಟಿ ನೀಡುತ್ತಿರುವುದು ತೃಣಮೂಲ ಕಾಂಗ್ರೆಸ್ ಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ಅಲ್ಲದೇ ಘಟಾನುಘಟಿ ನಾಯಕರನ್ನೇ ಸೋಲಿಸಲಾಗಿದೆ.
ಇದೇ ಮೊದಲ ಬಾರಿ ಬಂಗಾಳದಲ್ಲಿ ಸರ್ಕಾರ ರಚಿಸುತ್ತಿರುವ ಬಿಜೆಪಿ ಈಗಾಗಲೇ 234 ಕ್ಷೇತ್ರಗಳ ಪೈಕಿ 203 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಹುಮತಕ್ಕೆ ಬೇಕಾದ ಮ್ಯಾಜಿಕ್ ನಂಬರ್ ಆದ 148 ಸ್ಥಾನಗಳನ್ನು ದಾಟಿರುವುದರಿಂದ ಯಾರ ಮುಂದೆಯೂ ಕೈ ಚಾಚದೆ ಆರಾಮಾಗಿ ಬಿಜೆಪಿ ಸರ್ಕಾರ ರಚಿಸಲಿದೆ.
ಈ ಬಾರಿ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಬಿಜೆಜೆಪಿಯನ್ನು ಗೆಲ್ಲಿಸಲೇಬೇಕೆಂದು ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಖುದ್ದಾಗಿ ಅಖಾಡಕ್ಕೆ ಇಳಿದಿದ್ದರು. ಕಳೆದ 2 ತಿಂಗಳಲ್ಲಿ ಅನೇಕ ಬಾರಿ ನರೇಂದ್ರ ಮೋದಿ ಬಂಗಾಳಕ್ಕೆ ಆಗಮಿಸಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಅಮಿತ್ ಶಾ ಬಂಗಾಳದಲ್ಲೇ ಬೀಡುಬಿಟ್ಟು ರಾಜ್ಯದ ಬಿಜೆಪಿ ನಾಯಕರಿಗೆ ಸಲಹೆ-ಸೂಚನೆಗಳನ್ನು ನೀಡುತ್ತಾ ಬಂಗಾಳದಲ್ಲಿ ಬಿಜೆಪಿ ಪರ ಅಲೆ ಮೂಡಲು ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ, ಈ ಗೆಲುವು ಸಿಗಲು ಪಶ್ಚಿಮ ಬಂಗಾಳ ರಾಜ್ಯದ ಬಿಜೆಪಿ ನಾಯಕರಿಗಿಂತ ಹೆಚ್ಚಾಗಿ ಹೈಕಮಾಂಡ್ ನಾಯಕರ ಪರಿಶ್ರಮವೇ ಕಾರಣ ಎನ್ನಬಹುದು.