newsics.com/ನ್ಯೂಸಿಕ್ಸ್
ಬೆಂಗಳೂರು: ರಾಜ್ಯದಲ್ಲಿ ಪರಿಶಿಷ್ಟ ಜಾತಿ ಸಮುದಾಯಗಳಿಗೆ ಒಳ ಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಬೆನ್ನಲ್ಲೇ 56,432 ಸರ್ಕಾರಿ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ (ಡಿಪಿಎಆರ್) ಆದೇಶ ಹೊರಡಿಸಿದೆ.
https://youtube.com/shorts/4WeDGkWkv1E?si=V5-kEiXb0VaUEmaX
ಏ.24ರ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿದ್ದ ನಿರ್ಣಯವನ್ನು ಬದಲಿಸಿ ಗುರುವಾರ ಪರಿಷ್ಕೃತ ನಿರ್ಧಾರ ಕೈಗೊಳ್ಳಲಾಗಿದೆ. 100 ರೋಸ್ಟರ್ ಬಿಂದುಗಳ ಆಧಾರದ ಮೇಲೆ ಮೀಸಲಾತಿ ಹಾಗೂ ಒಳ ಮೀಸಲಾತಿ ಅನುಷ್ಠಾನ ಕಠಿಣವಾಗಲಿದೆ. ಹೀಗಾಗಿ ರೋಸ್ಟರ್ ಬಿಂದುಗಳನ್ನು 400 ಬಿಂದುಗಳ ವರ್ತುಲಗಳಾಗಿ ವಿಭಜಿಸಿ ಅದರ ಆಧಾರದ ಮೇಲೆ ಹಿಂದುಳಿದ ವರ್ಗ, ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿ ಹಾಗೂ ಅದರ ಒಳ ಮೀಸಲಾತಿ ನಿಗದಿ ಮಾಡಲು ತೀರ್ಮಾನಿಸಲಾಗಿದೆ.
ಇದೇ ವೇಳೆ ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿರುವ ಪ್ರಕರಣಗಳನ್ನು ಹೊರತುಪಡಿಸಿ 2025ರ ಸೆ.3ರ ಬಳಿಕ ಪರಿಶಿಷ್ಟ ಜಾತಿ ಒಳ ಮೀಸಲಾತಿ ಅನ್ವಯ ಆಗುವಂತೆ ಹೊರಡಿಸಿದ್ದ ಎಲ್ಲಾ ನೇಮಕಾತಿ ಅಧಿಸೂಚನೆಗಳನ್ನು ಹಿಂಪಡೆಯಲು ಸಂಪುಟ ನಿರ್ಧರಿಸಿದೆ.
ಪರಿಶಿಷ್ಟ ಜಾತಿಗೆ ಲಭ್ಯ ಶೇ 15 ಮೀಸಲಾತಿಯಲ್ಲಿ ಪ್ರವರ್ಗ ‘ಎ’ (ಎಡಗೈ ಸಂಬಂಧಿತ ಜಾತಿಗಳು), ಪ್ರವರ್ಗ ‘ಬಿ’ (ಬಲಗೈ ಸಂಬಂಧಿತ ಜಾತಿಗಳು) ಮತ್ತು ಪ್ರವರ್ಗ ‘ಸಿ’ಗೆ (ಸ್ಪೃಶ್ಯ, ಅತಿ ಸೂಕ್ಷ್ಮ, ಸೂಕ್ಷ್ಮ ಅಲೆಮಾರಿ ಜಾತಿಗಳು) ಕ್ರಮವಾಗಿ ಶೇ 5.25, 5.25, 4.50 ಪ್ರಮಾಣದಲ್ಲಿ ಒಳ ಮೀಸಲಾತಿ ನೀಡಲು ಏ.24ರಂದು ನಡೆದ ವಿಶೇಷ ಸಚಿವ ಸಂಪುಟ ಸಭೆ ತೀರ್ಮಾನ ಮಾಡಿತ್ತು. ಈ ಕುರಿತು ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ. ಹೀಗಾಗಿ, ನೇಮಕಾತಿಗೆ ಹುದ್ದೆ ಅಡೆ ತಡೆ ಸದ್ಯಕ್ಕೆ ನಿವಾರಣೆಯಾದಂತಾಗಿದೆ.
ನೇಮಕಾತಿಗೆ 400 ಬಿಂದುಗಳ ವರ್ತುಲಗಳನ್ನು ಅಳವಡಿಸಲಾಗುತ್ತದೆ. ಈ ವೇಳೆ ಯಾವುದೇ ನೇಮಕಾತಿಯಲ್ಲಿ 3ಕ್ಕಿಂತ ಕಡಿಮೆ ಪರಿಶಿಷ್ಟ ಜಾತಿ ಬಿಂದುಗಳು ಲಭ್ಯವಿದ್ದಲ್ಲಿ ಆಗ ಎಲ್ಲ ಪರಿಶಿಷ್ಟ ಜಾತಿಗೆ ಮೀಸಲಾದ ಹುದ್ದೆಗಳನ್ನು 101 ಜಾತಿಗಳಿಗೆ ಮುಕ್ತ ಅವಕಾಶ ನೀಡುವುದು. ಅಂದರೆ 3ಕ್ಕಿಂತ ಕಡಿಮೆ ಹುದ್ದೆ ಪರಿಶಿಷ್ಟ ಜಾತಿಗೆ ಮೀಸಲಿರುವಂತಹ ಸೀಮಿತ ಹುದ್ದೆಗಳ ನೇಮಕಾತಿಯಲ್ಲಿ ಒಳ ಮೀಸಲಾತಿ ಅನ್ವಯ ಆಗುವುದಿಲ್ಲ. ಆಗ 101 ಜಾತಿಗಳೂ ಸ್ಪರ್ಧೆ ಮಾಡಿ ಅರ್ಹರು ಆ ಹುದ್ದೆ ಪಡೆಯಬಹುದು ಎಂದು ಗುರುವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.17 ರಿಂದ ಶೇ.24ಕ್ಕೆ ಹೆಚ್ಚಳ ಮಾಡಿರುವುದು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿದೆ. ಹೀಗಾಗಿ ಎಲ್ಲಾ ನೇಮಕಾತಿಗಳಲ್ಲಿ ಪರಿಶಿಷ್ಟ ಜಾತಿಯ ಶೇ.2 ಹಾಗೂ ಪರಿಶಿಷ್ಟ ಪಂಗಡದ ಶೇ.4 ರಷ್ಟು ಹುದ್ದೆ ಸೇರಿ ಶೇ.6 ರಷ್ಟು ಹುದ್ದೆಗಳನ್ನು ಬ್ಯಾಕ್‌ಲಾಗ್ ಹುದ್ದೆ ಎಂದು ಪರಿಗಣಿಸಲಾಗುವುದು. ಎಸ್ಸಿ,ಎಸ್ಟಿ ಮೀಸಲಾತಿ ಹೆಚ್ಚಳದ ಪರ ನ್ಯಾಯಾಲಯ ಆದೇಶ ಮಾಡಿದರೆ ಆ ಹುದ್ದೆಗಳನ್ನು ಎಸ್ಸಿ,ಎಸ್ಟಿ ಅಭ್ಯರ್ಥಿಗಳಿಂದ ಭರ್ತಿ ಮಾಡಲು ತೀರ್ಮಾನಿಸಲಾಗಿದೆ.
ಈ ಎಲ್ಲ ನಿಯಮ ಮತ್ತು ಷರತ್ತು ಅನ್ವಯ 56,432 ಹುದ್ದೆಗಳ ನೇರ ನೇಮಕಾತಿಗೆ ತುರ್ತು ಕ್ರಮಕೈಗೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ. ಸಂಪುಟ ತೀರ್ಮಾನದಂತೆ ನೇಮಕಾತಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಿಂದ ಮಾರ್ಪಾಟಿತ 400 ಬಿಂದುಗಳ ರೋಸ್ಟರ್ ಹೊರಡಿಸಲಾಗುತ್ತದೆ.