ಬಹುಭಾಷಾ ನಟಿ ನಿತ್ಯಾ ಮೆನನ್ ರಿಲೇಷನ್‌ಶಿಪ್ ಬಗ್ಗೆ ಹೇಳಿರುವ ಮಾತುಗಳು ಸಖತ್ ವೈರಲ್ ಆಗ್ತಿದೆ. ಕೆಲ ತಿಂಗಳ ಹಿಂದೆ ಕನ್ನಡ ನಟಿ ಭಾವನಾ ಮದುವೆಯಾಗದೆಯೇ ಗರ್ಭಿಣಿಯಾಗಿ, ತಾಯಿಯಾಗುವ ನಿರ್ಧಾರವನ್ನು ಬಹಳ ಮುಕ್ತವಾಗಿ ಹಂಚಿಕೊಂಡಿದ್ದರು. ಈ ಬಗ್ಗೆ ಸಾಕಷ್ಟು ಜನ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ ಕೆಲವರು ಇದಕ್ಕೆ ಬೆಂಬಲ ಸೂಚಿಸಿದ್ದರು. ನಟಿ ನಿತ್ಯಾ ಮೆನನ್ ಕೂಡ ಇದರಲ್ಲಿ ತಪ್ಪೇನಿಲ್ಲ. ಅದು ಅವರವರ ಆಯ್ಕೆ ಎಂದಿದ್ದಾರೆ.
ಮದುವೆಯಾಗುವುದು ಮಕ್ಕಳನ್ನು ಹೆರುವುದಕ್ಕೆ ಎನ್ನುವ ಅಲಿಖಿತ ನಿಯಮವನ್ನು ಕೆಲವರು ಪ್ರಶ್ನಿಸುತ್ತಿದ್ದಾರೆ. ಒಬ್ಬ ವ್ಯಕ್ತಿಗೆ ಮದುವೆ ಮತ್ತು ಮಕ್ಕಳು ಬೇಕೆ ಬೇಕಾ? ಎನ್ನುವ ಚರ್ಚೆ ಕೂಡ ಆಗಾಗ್ಗೆ ನಡೆಯುತ್ತದೆ. ಇದೇ ವಿಚಾರಗಳನ್ನು ಆಧರಿಸಿ ಕಳೆದ ವರ್ಷ ‘ಕಾದಲಿಕ್ಕ ನೇರಮಿಲ್ಲೆ’ ಎಂಬ ಸಿನಿಮಾ ಬಂದಿತ್ತು. ಚಿತ್ರದಲ್ಲಿ ನಿತ್ಯಾ ಮೆನನ್ ನಾಯಕಿಯಾಗಿ ನಟಿಸಿದ್ದರು. ಈ ಸಿನಿಮಾ ಬಿಡುಗಡೆ ಸಮಯದಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಅದರ ತುಣುಕು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಸಂದರ್ಶನದಲ್ಲಿ ರ್ಯಾಪಿಡ್ ಫೈಯರ್ ಪ್ರಶ್ನೆಗಳು ಎದುರಾಗಿತ್ತು. ಅದಕ್ಕೆ ನಿತ್ಯಾ ಉತ್ತರಿಸಿದ್ದರು. ಮದುವೆಗೂ ಮುನ್ನ ಗರ್ಭಿಣಿ ಆಗುವುದು ಸರೀನಾ? ತಪ್ಪಾ? ಎನ್ನುವ ಪ್ರಶ್ನೆಗೆ “ಮದುವೆಗೂ ಮುನ್ನ, ನಂತರ ಎನ್ನುವುದಕ್ಕಿಂತ ಮದುವೆ ಇಲ್ಲದೇ ಗರ್ಭಿಣಿ ಆಗುವುದು ತಪ್ಪೇನಿಲ್ಲ ಎನ್ನಬಹುದು. ಮದುವೆ ಇಲ್ಲದೇ ಗರ್ಭಿಣಿ ಆಗುವುದು ಪರವಾಗಿಲ್ಲ. ನಿಮಗೆ ಮಕ್ಕಳು ಬೇಕು, ಮದುವೆ ಬೇಡ ಅಂದ್ರೆ ಓಕೆ. ಈಗ ಮಕ್ಕಳು ಮಾಡಿಕೊಳ್ಳಲು ಸಾಕಷ್ಟು ದಾರಿಗಳಿವೆ. ಸಾಕಷ್ಟು ಜನ ಅದನ್ನು ಅನುಸರಿಸುತ್ತಿದ್ದಾರೆ” ಎಂದು ನಿತ್ಯ ಹೇಳಿದ್ದಾರೆ.
ಮದುವೆ ರಿಲೇಷನ್‌ಶಿಪ್ ಅಥವಾ ಮಕ್ಕಳು ಇಲ್ಲದ ರಿಲೇಷನ್‌ಶಿಪ್ ಯಾವುದು ನಿಮ್ಮ ಆಯ್ಕೆ ಎನ್ನುವ ಪ್ರಶ್ನೆಗೆ “ಮದುವೆ ರಿಲೇಷನ್‌ಶಿಪ್ ಹಾಗೂ ಮಕ್ಕಳು ಇಲ್ಲದ ಜೀವನ ನನ್ನ ಆಯ್ಕೆ” ಎಂದು ನಿತ್ಯಾ ಮೆನನ್ ಹೇಳಿರುವುದು ವೈರಲ್ ಆಗ್ತಿದೆ.
28 ವರ್ಷಗಳ ಹಿಂದೆ ಬಾಲನಟಿಯಾಗಿ ನಿತ್ಯಾ ಮೆನನ್ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡದ ‘7 o’ ಕ್ಲಾಕ್’ ಸಿನಿಮಾ ಮೂಲಕ ನಾಯಕಿಯಾಗಿದ್ದರು. ಬಳಿಕ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸೋಕೆ ಆರಂಭಿಸಿದರು. ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಕೂಡ ನಿತ್ಯಾ ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕೆಲ ಹಿಟ್ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ.
ಕೇರಳ ಮೂಲದ ನಿತ್ಯಾ ಮೆನನ್ ಅಜ್ಜ- ಅಜ್ಜಿ ಬೆಂಗಳೂರಿನಲ್ಲಿ ಬಹಳ ವರ್ಷಗಳ ಹಿಂದೆ ನೆಲೆಗೊಂಡಿದ್ದರು. ಹಾಗಾಗಿ ನಿತ್ಯಾ ಇಲ್ಲೇ ಹುಟ್ಟಿ ಬೆಳೆದವರು. ಗಾಯಕಿಯಾಗಿ ಗುರ್ತಿಸಿಕೊಂಡಿರುವ ಚೆಲುವೆ ಕೆಲ ಹಾಡುಗಳಿಗೆ ದನಿಯಾಗಿದ್ದಾರೆ. ತಮ್ಮದೇ ಚಿತ್ರ ನಿರ್ಮಾಣ ಸಂಸ್ಥೆಯನ್ನು ಕೂಡ ಆರಂಭಿಸಿದ್ದಾರೆ. 38 ವರ್ಷ ವಯಸ್ಸಾಗಿದ್ದರೂ ನಿತ್ಯಾ ಇನ್ನು ಮದುವೆ ಆಗಿಲ್ಲ. ಈ ಹಿಂದೆ ಲವ್, ಬ್ರೇಕಪ್ ಎಲ್ಲವೂ ಆಗಿದೆ. ಆದರೆ ಮದುವೆ ಆಗಲು ಆತುರ ಇಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಮನೆಯಲ್ಲಿ ಮದುವೆಗೆ ಬಹಳ ಬಲವಂತ ಮಾಡಿದರು. ಚಿಕ್ಕಂದಿನಿಂದ ನನಗೆ ಒಬ್ಬ ಸೋಲ್‌ಮೇಟ್ ಬೇಕು, ಆತನೊಂದಿಗೆ ಸುಂದರ ಜೀವನ ನಡೆಸಬೇಕು ಎನಿಸಿತ್ತು. ಆದರೆ ಅಂತಹ ಸೋಲ್‌ಮೇಟ್ ಸಿಗಲೇ ಇಲ್ಲ ಎಂದಿದ್ದರು.