newsics.com/ನ್ಯೂಸಿಕ್ಸ್
ರಾಜ್ಯವು ಹಲವು ವರ್ಷಗಳ ನಂತರ ಹೀಟ್ ವೇವ್ ಬಿಸಿ ಅನುಭವಿಸುತ್ತಿದೆ. ಇದರ ಪರಿಣಾಮ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗಿದೆ. ಮುಂದಿನ ಎರಡು ತಿಂಗಳಲ್ಲಿ ರಾಜ್ಯ ನೀರಿನ ಸಮಸ್ಯೆ ಎದುರಿಸಬಹುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದ್ದು, ಜಿಲ್ಲಾಮಟ್ಟದಲ್ಲಿ ಸಮಸ್ಯೆ ಮೇಲೆ ನಿಗಾವಹಿಸಿ ಪರಿಹಾರ ನೀಡಲು ಶಾಸಕರ ಅಧ್ಯಕ್ಷತೆಯ ಟಾಸ್ಕ್‌ಫೋರ್ಸ್ ಕೆಲಸ ಮಾಡಲಿದೆ ಎಂದು ತಿಳಿಸಿದರು.
ನೀರಿನ ಸಮಸ್ಯೆ ಎದುರಾಗದಂತೆ ಮುಂಜಾಗ್ರತ ಕ್ರಮ
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಹಲವು ವರ್ಷಗಳ ನಂತರ ಹೀಟ್ ವೇವ್‌ನ ಅನುಭವ ಆಗುತ್ತಿದೆ. ಇದರಿಂದ ರಕ್ಷಣೆಗಾಗಿ ಆರೋಗ್ಯ ಇಲಾಖೆಯಿಂದ ಎಸ್‌ಒಪಿ ಪ್ರಕಟಿಸಲಾಗಿದೆ. ಅದರ ಜತೆಗೆ ಕೊಳವೆಬಾವಿ, ಅಣೆಕಟ್ಟುಗಳಲ್ಲಿ ನೀರು ಕಡಿಮೆಯಾಗುತ್ತಿದೆ. ಮುಂದಿನ ಎರಡು ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ಅದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಾಗಲೇ ಸಭೆ ನಡೆಸಿದ್ದಾರೆ. ನೀರಿನ ಸಮಸ್ಯೆ ಎದುರಾಗದಂತೆ ಏನೆಲ್ಲ ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಸೂಚನೆ ನೀಡಿದ್ದಾರೆ ಎಂದರು.