ಆದಿಚುಂಚನಗಿರಿಯಲ್ಲಿ ಸುಮಾರು 80 ಕೋಟಿ ರೂ ವೆಚ್ಚದಲ್ಲಿ ಬೈರವೈಕ್ಯ ಮಂದಿರ ನಿರ್ಮಾಣವಾಗಿದ್ದು, ಸದ್ಯ ಉದ್ಘಾಟನೆಗೆ ಸಜ್ಜಾಗಿದೆ. ಚಾಲುಕ್ಯ, ಹೊಯ್ಸಳ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮದೊಂದಿಗೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ನಾಳೆ ಅಂದರೆ ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ.
ಪ್ರಧಾನಿ ಮಂಡ್ಯ ಪ್ರವಾಸದ ವಿವರ ಹೀಗಿದೆ
ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಭೈರವೈಕ್ಯ ಮಂದಿರ ಉದ್ಘಾಟಿಸಿ, ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಿಜಿಎಸ್ ಕ್ರೀಡಾಂಗಣದಲ್ಲಿ ಭಕ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಹಿನ್ನೆಲೆ ನಾಳೆ ಬೆಳಗ್ಗೆ 10.05ಕ್ಕೆ HAL ಏರ್ಪೋರ್ಟ್ಗೆ ಪ್ರಧಾನಿ ಮೋದಿ ಆಗಮಿಸಿಲಿದ್ದಾರೆ. 10.10ಕ್ಕೆ ಬೆಂಗಳೂರಿನ ಹೆಚ್ಎಎಲ್ನಿಂದ ತೆರಳುವ ಅವರು, ಬೆಳಗ್ಗೆ 10.50ಕ್ಕೆ ಆದಿಚುಂಚನಗಿರಿ ತಪೋವನ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಬಳಿಕ ರಸ್ತೆ ಮೂಲಕ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸುತ್ತಾರೆ.
ಮೊದಲು ಗೋರಕ್ಷಕನಾಥರು ತಪಸ್ಸು ಮಾಡಿದ ಜ್ವಾಲಾಪೀಠ ದರ್ಶನ ಮಾಡಲಿರುವ ಪ್ರಧಾನಿ ಮೋದಿ, ನಂತರ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಶ್ರೀಗಿರಿ ತಪೋವನದಿಂದ 1.5 ಕಿ.ಮೀ. ದೂರದಲ್ಲಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ HAL ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.