ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಶ್ರೀ ವಿಕಾಸ್ ನರ್ಸಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ನರ್ಸಿಂಗ್ ವಿದ್ಯಾರ್ಥಿನಿ ಮೇಲೆ ಕಾಲೇಜು ಆಡಳಿತ ಮಂಡಳಿ ದೌರ್ಜನ್ಯ ಎಸಗಿದೆ. ಕೇವಲ ಫೀಸ್ ಪಾವತಿಸಲು ವಿಳಂಬವಾಯಿತು ಎಂಬ ಕಾರಣಕ್ಕೆ ವಿದ್ಯಾರ್ಥಿನಿಯನ್ನು ಅತ್ಯಂತ ಕೀಳಾಗಿ ನಡೆಸಿಕೊಳ್ಳಲಾಗಿದೆ.
ಏನಿದು ಘಟನೆ ?
ವಿದ್ಯಾರ್ಥಿನಿ ಮೊದಲ ವರ್ಷದ 2 ಲಕ್ಷ ರೂ. ಫೀಸನ್ನು ಸರಿಯಾದ ಸಮಯಕ್ಕೆ ಪಾವತಿಸಿದ್ದರು. ಆದರೆ ಎರಡನೇ ವರ್ಷದ ಫೀಸ್ ಕಟ್ಟಲು ಸ್ವಲ್ಪ ತಡವಾಗಿತ್ತು.ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಕಾಲೇಜು ಮ್ಯಾನೇಜ್‌ಮೆಂಟ್ ಆಕೆಗೆ ಸತತ 3 ದಿನಗಳ ಕಾಲ ಕಾಲೇಜಿನ ಶೌಚಾಲಯಗಳನ್ನು (ಬಾತ್‌ರೂಮ್) ತೊಳೆಯುವಂತೆ ಶಿಕ್ಷೆ ನೀಡಿದೆ.
ದೈಹಿಕ ದಂಡನೆ : ಶೌಚಾಲಯ ಕ್ಲೀನ್ ಮಾಡಿಸಿದ್ದಲ್ಲದೆ, ಗಂಟೆಗಳ ಕಾಲ ಆಕೆಗೆ ‘ಗೋಡೆ ಕುರ್ಚಿ’ (Wall sit) ಹಾಕುವಂತೆ ಮಾಡಿ ಚಿತ್ರಹಿಂಸೆ ನೀಡಲಾಗಿದೆ.
ಪ್ರತಿಭಟನೆ ಮತ್ತು ಆಕ್ರೋಶ: ಈ ವಿಷಯ ತಿಳಿಯುತ್ತಿದ್ದಂತೆಯೇ ವಿದ್ಯಾರ್ಥಿ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಕಾಲೇಜಿನ ಮುಂದೆ ಭಾರಿ ಪ್ರತಿಭಟನೆ ನಡೆಸಿವೆ. ತಪ್ಪಿತಸ್ಥ ಆಡಳಿತ ಮಂಡಳಿಯ ವಿರುದ್ಧ ಎಸ್‌ಸಿ/ಎಸ್‌ಟಿ ಅಟ್ರಾಸಿಟಿ ಕೇಸ್ ದಾಖಲಿಸಬೇಕು ಮತ್ತು ಕಾಲೇಜಿನ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿವೆ. ಪ್ರಸ್ತುತ ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.