https://youtube.com/shorts/w77Qj39UtDA?si=G-t7V0TrkmzYuWQ5
newsics.com
ಜಾಗತಿಕ ಮಾರುಕಟ್ಟೆಯಲ್ಲಿ ಭೌಗೋಳಿಕ ರಾಜಕೀಯ ಸಂಘರ್ಷಗಳು ತಾರಕಕ್ಕೇರಿರುವ ಬೆನ್ನಲ್ಲೇ, ಹಳದಿ ಲೋಹದ ಬೆಲೆಯಲ್ಲಿ ಅಸ್ಥಿರತೆ ಕಂಡುಬರುತ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಯುದ್ಧದ ಕಾರ್ಮೋಡಗಳು ಚಿನ್ನದ ಮಾರುಕಟ್ಟೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಪೆಟ್ರೋಲ್‌ನಿಂದ ಹಿಡಿದು, ಗ್ಯಾಸ್, ಚಿನ್ನದ ಬೆಲೆ ತನಕ ಭಾರೀ ಪ್ರಮಾಣದ ಏರಿಳಿಕೆ ಉಂಟಾಗಿದೆ.
ಸಾಮಾನ್ಯವಾಗಿ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯನ್ನು ಸುರಕ್ಷಿತ ಹೂಡಿಕೆಯಾಗಿ ಖರೀದಿಸಲು ಒಲವು ತೋರುತ್ತಾರೆ. ಆದರೆ, ಈ ಯುದ್ಧದ ಸಮಯದಲ್ಲಿ, ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗಮನಾರ್ಹವಾಗಿ ಕುಸಿದಿವೆ. ಹೀಗಿರೋವಾಗ ಮುಂದಿನ ಮೂರು ತಿಂಗಳಲ್ಲಿ ಚಿನ್ನದ ಬೆಲೆ ಏನಾಗಬಹುದು? ಈ ಬಗ್ಗೆ ತಜ್ಞರು ಆಘಾತಕಾರಿ ಮುನ್ಸೂಚನೆ ನೀಡಿದ್ದಾರೆ.
ಇರಾನ್ ಯುದ್ಧದ ಒತ್ತಡವು ಜಾಗತಿಕ ಚಿನ್ನದ ಮಾರುಕಟ್ಟೆಯಲ್ಲೂ ಸ್ಪಷ್ಟವಾಗಿ ಗೋಚರಿಸುತ್ತಿದೆ. ಡಾಲರ್ ಏರಿಕೆಯಿಂದಾಗಿ ಚಿನ್ನದ ಬೆಲೆ ಕುಸಿಯುತ್ತಿದೆ ಎಂದು ಹೇಳಲಾಗುತ್ತಿದೆ.
ಜಾಗತಿಕ ಮತ್ತು ಭಾರತೀಯ ಚಿನ್ನದ ಮಾರುಕಟ್ಟೆಗಳಲ್ಲಿ ಈ ಸಮಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಕಳೆದ ಒಂದು ವಾರದಲ್ಲಿ, ಚಿನ್ನದ ಬೆಲೆ ಶೇಕಡಾ 10 ರಷ್ಟು ಕುಸಿದಿದೆ. ಇದು 1983 ರ ನಂತರದ, ಅಂದರೆ ಕಳೆದ 43 ವರ್ಷಗಳಲ್ಲಿನ ಅತಿದೊಡ್ಡ ವಾರದ ಕುಸಿತವಾಗಿದೆ. ಜನವರಿ 2026 ರಲ್ಲಿ ಚಿನ್ನವು ಗರಿಷ್ಠ ಮಟ್ಟವನ್ನು ತಲುಪಿತ್ತು, ಆದರೆ ಅಂದಿನಿಂದ ಕೇವಲ ಎರಡು ತಿಂಗಳಲ್ಲಿ ಬೆಲೆಗಳು ಶೇಕಡಾ 20 ರಿಂದ 25 ರಷ್ಟು ಕುಸಿದಿವೆ.
ಭಾರತೀಯ ಮಾರುಕಟ್ಟೆಯನ್ನು ಪರಿಗಣಿಸಿದರೆ, ಜನವರಿಯಿಂದ ಚಿನ್ನದ ಬೆಲೆ ಶೇ. 16 ರಷ್ಟು ಅಗ್ಗವಾಗಿದೆ. ಜನವರಿ 29, 2026 ರಂದು ಚಿನ್ನದ ಬೆಲೆ ತಲುಪಿದ ಗರಿಷ್ಠ ಮಟ್ಟಕ್ಕೆ ಹೋಲಿಸಿದರೆ, ಈಗ ಬೆಲೆ ರೂ. 28,607 ರಷ್ಟು ಕಡಿಮೆಯಾಗಿದೆ. 2025 ರಲ್ಲಿ, ಚಿನ್ನವು ಶೇ. 75 ರಷ್ಟು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು, ಆದರೆ ಈಗ ಈ ಚಿತ್ರಣ ಸಂಪೂರ್ಣವಾಗಿ ಬದಲಾಗಿದೆ.
ಆಕ್ಸಿಸ್ ಮ್ಯೂಚುವಲ್ ಫಂಡ್ ಮತ್ತು ಬಿಎಂಐ ವರದಿಯ ಪ್ರಕಾರ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆಗಳು ಕಡಿಮೆ. ಜೂನ್ 2026 ರವರೆಗೆ ಚಿನ್ನದ ಬೆಲೆಗಳು ಒತ್ತಡದಲ್ಲಿರುತ್ತವೆ ಎಂದು ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ‘ಚೌಕಾಶಿ ಖರೀದಿ’ಯ ಲಕ್ಷಣಗಳು ಕಂಡುಬಂದರೂ,ಹೂಡಿಕೆದಾರರು ಜಾಗರೂಕರಾಗಿರಬೇಕು.