newsics.com
ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಜೂ.4ರಂದು ಬಿಡುಗಡೆಯಾಗುತ್ತಿದೆ. ಯಶ್ ನಟನೆಯ ಈ ಸಿನಿಮಾನಲ್ಲಿ ಹಲವು ಸ್ಟಾರ್ ನಟಿಯರು ನಾಯಕಿಯರಾಗಿ ನಟಿಸಿದ್ದಾರೆ.
ನಯನತಾರಾ, ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್, ಹುಮಾ ಖುರೇಷಿ ಮತ್ತು ತಾರಾ ಸುತರಿಯಾ ಅವರುಗಳು ನಟಿಸಿದ್ದಾರೆ. ಆದರೆ ಇಷ್ಟು ಮಂದಿ ನಟಿಯರಲ್ಲಿ ಕಿಯಾರಾ ಅಡ್ವಾಣಿ ಅವರದ್ದು ಬಹು ಮುಖ್ಯ ಪಾತ್ರ ಎನ್ನಲಾಗುತ್ತಿದೆ. ಇದು ಅವರ ಪಾಲಿಗೆ ಮೊದಲ ಕನ್ನಡ ಸಿನಿಮಾ ಆಗಿದೆ. ಆದರೆ ಈ ಸಿನಿಮಾಕ್ಕೆ ನಾಯಕಿಯಾಗಿ ಕಿಯಾರಾ ಹೇಗೆ ಆಯ್ಕೆಯಾಗಿದ್ದಾರೆ ಎಂದು ನಿರ್ದೇಶಕಿ ಗೀತು ಮೋಹನ್ ದಾಸ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕಿ ಗೀತು ಮೋಹನ್ ದಾಸ್, ನಾಡಿಯಾ ಪಾತ್ರಕ್ಕೆ ಕಿಯಾರಾ ಅವರೇ ನನ್ನ ಮೊದಲ ಮತ್ತು ಏಕೈಕ ಆಯ್ಕೆಯಾಗಿದ್ದರು ಎಂದು ತಿಳಿಸಿದ್ದಾರೆ.
ನಾಡಿಯಾ ಪಾತ್ರಕ್ಕೆ ಮೃದುತ್ವವೂ ಆವೇಶವೂ ಇದೆ. ಕಿಯಾರಾ ನಟನೆಯನ್ನು ಬಹಳ ಸೂಕ್ಷ್ಮವಾಗಿ ಗಮನಿಸಿದ ನನಗೆ ಈ ಪಾತ್ರಕ್ಕೆ ಅವರನ್ನು ಬಿಟ್ಟರೆ ಇನ್ನೊಬ್ಬರಿಲ್ಲ ಅನಿಸಿತ್ತು. ಸಿನಿಮಾದಲ್ಲಿ ತರ್ಕ ವರ್ಕೌಟ್ ಆಗುವುದಿಲ್ಲ. ಇಲ್ಲಿ ಎಮೋಶನ್ ಅಥವಾ ಭಾವನೆಯೇ ಪ್ರಬಲ ಮಾಧ್ಯಮ. ತರ್ಕಕ್ಕೂ ಮೀರಿ ಭಾವನಾತ್ಮಕವಾಗಿ ಕಿಯಾರಾ ಅವರನ್ನು ಆಯ್ಕೆ ಮಾಡಿದೆ.
ಕಿಯಾರಾ ಪಾತ್ರವನ್ನು ಜೀವಿಸುವ ಬಗೆ ಅದ್ಭುತ. ಆಕೆ ತೆರೆ ಮೇಲಿದ್ದರೆ ನಟಿಸುತ್ತಿದ್ದಾಳೆ ಅನಿಸಲ್ಲ, ಪಾತ್ರವೇ ನಮ್ಮೆದುರು ನಿಂತಂತೆ ಭಾಸವಾಗುತ್ತದೆ. ಅಬ್ಬರಕ್ಕಿಂತ ಗಾಢವಾಗಿ ತಟ್ಟುವ ಹುಡುಗಿಯವಳು. ಮೌನವಾಗಿರುತ್ತಾಳೆ, ಮನಸ್ಸಲ್ಲೇ ಪಾತ್ರದ ಬಗ್ಗೆ ಆಲೋಚಿಸುತ್ತಿರುತ್ತಾಳೆ. ಕೆಲವೊಮ್ಮೆ ಪಾತ್ರದ ಬಗ್ಗೆ ಕುತೂಹಲದಿಂದ ವಿಚಾರಿಸುತ್ತಾಳೆ. ನಿರ್ದೇಶಕರ ಚಿಂತನೆಯನ್ನು ಗ್ರಹಿಸಿ ಪಾತ್ರಕ್ಕಿಳಿಸುವ ಕಲೆ ಈಕೆಗಿದೆ.ಈ ಹುಡುಗಿಯ ಶಿಸ್ತು, ಪ್ರಾಮಾಣಿಕತೆ, ತಾನಾಯ್ತು ತನ್ನ ಕೆಲಸ ಆಯ್ತು ಎಂಬ ಪ್ರವೃತ್ತಿ ನನಗೆ ಇಷ್ಟವಾದ ಮತ್ತೊಂದು ಅಂಶ ಎಂದು ನಿರ್ದೇಶಕಿ ಮೋಹನ್ ದಾಸ್ ಹೇಳಿದ್ದಾರೆ.
ಕಿಯಾರಾ ಅಡ್ವಾಣಿ ಅವರು ಜುಲೈ 2025 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ನಂತರ, ಈ ದೊಡ್ಡ ಪ್ರಾಜೆಕ್ಟ್ ಮೂಲಕ ಮತ್ತೆ ಬೆಳ್ಳಿತೆರೆಗೆ ಮರಳುತ್ತಿದ್ದಾರೆ.