ಚಾಮರಾಜನಗರ: ಹಲವು ದಸರಾಗಳಲ್ಲಿ ಭಾಗಿಯಾಗಿ ಸದ್ಯ ಏಕಾಂಗಿಯಾಗಿರುವ ವಯೋವೃದ್ಧ ಗಜೇಂದ್ರ ಎಂಬ ಹೆಸರಿನ ಆನೆಯನ್ನು ಶಿಬಿರಕ್ಕೆ ಕಳುಹಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಬೂದಿಪಡಗದಲ್ಲಿರುವ ಸಾಕಾನೆ ಗಜೇಂದ್ರನಿಗೆ ಸದ್ಯ 75 ವರ್ಷಗಳಾಗಿದ್ದು, ಕಳೆದ ಹಲವಾರು ವರ್ಷಗಳಿಂದ ಈತ ಏಕಾಂಗಿ ಆಗಿದ್ದಾನೆ. ಈ ಹಿಂದೆ ಈತ ಕೆ. ಗುಡಿಯಲ್ಲಿದ್ದ ಸಂದರ್ಭದಲ್ಲಿ ದುರ್ಗಾಪರಮೇಶ್ವರಿ ಎಂಬ ಆನೆ ಇತ್ತು. ಆ ಆನೆಯೂ ಕೂಡ ಇದೀಗ ಬೇರೆ ಶಿಬಿರದಲ್ಲಿದ್ದು, ಗಜೇಂದ್ರ ಕಳೆದ 5 – 6ವರ್ಷಗಳಿಂದ ಒಂಟಿಯಾಗಿದೆ ಜೊತೆಗೆ ವಯಸ್ಸು ಕೂಡ ಆಗಿದೆ.
ಹಲವು ದಸರಾದಲ್ಲಿ ಭಾಗಿಯಾಗಿರುವ ಗಜೇಂದ್ರನಿಗೆ 75 ವರ್ಷ ವಯಸ್ಸಾಗಿದ್ದು, ದೈಹಿಕ ಸಾಮರ್ಥ್ಯ ಕೂಡ ಕ್ಷೀಣಿಸಿದೆ. ಕಾಡಿಗೆ ನಿತ್ಯವೂ ಮೇಯಲು ಬಿಟ್ಟ ಸಂದರ್ಭದಲ್ಲಿ ಬಲಿಷ್ಠ ಕಾಡಾನೆಗಳಿಂದ ಗಜೇಂದ್ರನಿಗೆ ಅಪಾಯ ಎದುರಾಗುವ ಹಿನ್ನೆಲೆ ಮತ್ತಿಗೋಡು ಇಲ್ಲವೇ ಬೇರೆ ಶಿಬಿರಕ್ಕೆ ರವಾನಿಸಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಆದೇಶಿಸಿದ್ದಾರೆ.
ಸದ್ಯ, ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಬೂದಿಪಡಗದಲ್ಲಿ ಗಜೇಂದ್ರನನ್ನು ನೋಡಿಕೊಳ್ಳಲಾಗುತ್ತಿದೆ. ಇನ್ನು, ಈ ಕುರಿತು ಬಿಆರ್ ಡಿಸಿಎಫ್ ಶ್ರೀಪತಿ ಅವರನ್ನು ಹಲವು ಬಾರಿ ಸಂಪರ್ಕಿಸಿತರಾದರೂ ಪ್ರತಿಕ್ರಿಯೆಗೆ ಸಿಗಲಿಲ್ಲ.
1987ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯ ಪ್ರದೇಶದಲ್ಲಿ ಗಜೇಂದ್ರನನ್ನು ಸೆರೆಹಿಡಿದು ಬಳಿಕ ಕೆ. ಗುಡಿ ಆನೆ ಶಿಬಿರದಲ್ಲಿ ಇರಿಸಲಾಗಿತ್ತು. ಹಲವು ಬಾರಿ ದಸರಾದಲ್ಲಿ ಈ ಆನೆ ಭಾಗಿಯಾಗಿದ್ದು, ತುಂಬಾ ಸೌಮ್ಯ ಎಂದೇ ಹೆಸರುವಾಸಿಯಾಗಿತ್ತು. ದಸರಾ ವೇಳೆ ‘ಪಟ್ಟದ ಆನೆ’ ಎಂದು ಕರೆಯಲಾಗಿತ್ತು
2015 ರ ಜೂನ್ 16ರ ರಾತ್ರಿ ಮಸ್ತಿಯಲ್ಲಿದ್ದ ಗಜೇಂದ್ರ ತನ್ನ ಸಹ ಆನೆ ಶ್ರೀರಾಮನನ್ನು ತಿವಿದು ಕೊಂದಿದ್ದಲ್ಲದೇ, ಕೆ. ಗುಡಿ ಶಿಬಿರದಲ್ಲಿ ಅವುಗಳನ್ನು ಬೇರ್ಪಡಿಸಲು ಯತ್ನಿಸಿದ ತನ್ನ ಮಾವುತ ಗಣಪತಿ(50)ಯನ್ನೂ ತುಳಿದಿದ್ದರು. ಬಳಿಕ, ಹೊಂದಿಕೊಂಡು ವಿವಿಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿ ಹೆಸರು ಗಳಿಸಿದ್ದ. ಸದ್ಯ ಏಕಾಂಗಿಯಾಗಿದ್ದಾನೆ.