newsics.com
ಬೆಂಗಳೂರು:ವನ್ಯಜೀವಿಗೆ ಚಿಕಿತ್ಸೆ ನೀಡಲು ತೆರಳಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟ ಘಟನೆ ಶಿವಮೊಗ್ಗದ ತಾವರೆಕೊಪ್ಪದ ಹುಲಿ ಮತ್ತು ಸಿಂಹ ಧಾಮದಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.
ವನ್ಯಜೀವಿಯ ತುರ್ತು ಚಿಕಿತ್ಸೆಗಾಗಿ ತೆರಳಿದ್ದ ಸಂದರ್ಭದಲ್ಲಿ ನೀರಾನೆಯು ಏಕಾಏಕಿ ದಾಳಿ ನಡೆಸಿದ್ದು, ಡಾ. ಸಮೀಕ್ಷಾ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ 6:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಇದೊಂದು ದುರದೃಷ್ಟಕರ ಘಟನೆ ಎಂದು ಶೋಕ ವ್ಯಕ್ತಪಡಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಈ ದುಃಖದ ಸಂದರ್ಭದಲ್ಲಿ ಮೃತ ವೈದ್ಯರ ಕುಟುಂಬದೊಂದಿಗೆ ಸರ್ಕಾರ ನಿಲ್ಲುತ್ತದೆ. ಪ್ರತಿಯೊಂದು ಜೀವವೂ ಅಮೂಲ್ಯ. ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಈ ದುರದೃಷ್ಟಕರ ಘಟನೆಗೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿಯಮಾನುಸಾರ ಮೃತರ ಕುಟುಂಬಕ್ಕೆ ಕೂಡಲೇ ಪರಿಹಾರ ಧನ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಘಟನೆಯ ಬಗ್ಗೆ ಹಿರಿಯ ಪಶುವೈದ್ಯರು ಮತ್ತು ಅರಣ್ಯಾಧಿಕಾರಿಗಳ ತಂಡದಿಂದ ತನಿಖೆ ನಡೆಸಿ, 7 ದಿನಗಳ ಒಳಗಾಗಿ ವರದಿ ನೀಡಲು ಆದೇಶಿಸಿದ್ದಾರೆ.
ರಾಜ್ಯದ ಎಲ್ಲಾ ಮೃಗಾಲಯಗಳ ಪಶುವೈದ್ಯರು ವನ್ಯಜೀವಿಗಳಿಗೆ ಚಿಕಿತ್ಸೆ ನೀಡುವಾಗ ಕಡ್ಡಾಯವಾಗಿ ಪ್ರಮಾಣಿತ ಮಾನದಂಡಗಳನ್ನು (SOP) ಪಾಲಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.