newsics.com
ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕವನ್ನು ‘ಕ್ಯಾಶ್ ಕೌ’ ಆಗಿ ಬಳಸಿಕೊಂಡು ಪಂಚ ರಾಜ್ಯಗಳ ಚುನಾವಣೆಗೆ ಹಣ ಸಂಗ್ರಹಿಸುತ್ತಿದೆ ಎಂದು ಐಶ್ವರ್ಯಾ ಅನಂತ ಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಐಶ್ವರ್ಯ ಅನಂತ್ ಕುಮಾರ್ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ಕಾಂಗ್ರೆಸ್ ಪಕ್ಷವು ಕರ್ನಾಟಕವನ್ನು ತನ್ನ ರಾಜಕೀಯ ಹಿತಾಸಕ್ತಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ‘ಮತ್ತೆ ಅದೇ ಕಥೆ ಶುರುವಾಗಿದೆ.
ಮುಂಬರುವ ಅಸ್ಸಾಂ ಚುನಾವಣೆಯ ರಾಜಕೀಯ ಪ್ರಚಾರಗಳಿಗೆ ಹಣ ಒದಗಿಸಲು ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಕರ್ನಾಟಕವನ್ನು ‘ನಗದು ಹಸು’ ಆಗಿ ಬಳಸಿಕೊಳ್ಳಲು ತಂತ್ರ ಹೂಡುತ್ತಿದೆ’ ಎಂದು ನೇರವಾಗಿ ಆರೋಪಿಸಿದ್ದಾರೆ.
ತಮ್ಮ ಟ್ವೀಟ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಟ್ಯಾಗ್ ಮಾಡಿರುವ ಐಶ್ವರ್ಯ, ಅವರ ನಿಷ್ಠೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ‘ಡಿ.ಕೆ. ಶಿವಕುಮಾರ್ ಸರ್, ಕರ್ನಾಟಕಕ್ಕೆ ನಿಮ್ಮ ನಿಷ್ಠೆ ಎಲ್ಲಕ್ಕಿಂತ ಮಿಗಿಲು ಎಂದು ನೀವು ಪದೇ ಪದೇ ಹೇಳುತ್ತಿರುತ್ತೀರಿ. ಹಾಗಿರುವಾಗ, ರಾಜ್ಯವು ಭಾರಿ ಸಾಲದ ಸುಳಿಯಲ್ಲಿ ಸಿಲುಕಿರುವಾಗ ಕಾಂಗ್ರೆಸ್ ಹೈಕಮಾಂಡ್‌ಗಾಗಿ ನೀವು ಈ ಪಾತ್ರವನ್ನು (ಹಣ ಒದಗಿಸುವ ಪಾತ್ರ) ಏಕೆ ನಿರ್ವಹಿಸುತ್ತಿದ್ದೀರಿ?’ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.