newsics.com
ಗ್ಯಾಸ್ ಕೊರತೆಯಿಂದ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಕರ್ನಾಟಕ ಸರ್ಕಾರ ಮತ್ತೊಂದು ಆಘಾತ ನೀಡಿದೆ. ಹೋಟೆಲ್‌ಗಳಿಗೆ ಸದ್ಯಕ್ಕೆ ಎಲ್‌ಪಿಜಿ ಗ್ಯಾಸ್ ಪೂರೈಕೆ ಸಾಧ್ಯವಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಹೆಚ್. ಮುನಿಯಪ್ಪ ತಿಳಿಸಿದ್ದಾರೆ.
ತೈಲ ಪೂರೈಕೆ ಕಂಪನಿಗಳೊಂದಿಗೆ ನಡೆದ ಸಭೆಯ ಬಳಿಕ ಮಾತನಾಡಿದ ಸಚಿವರು, ಪರಿಸ್ಥಿತಿ ಗಂಭೀರವಾಗಿದ್ದು ಕೇಂದ್ರ ಸರ್ಕಾರ ಹೆಚ್ಚಿನ ಗಮನ ಹರಿಸಬೇಕಾಗಿದೆ ಎಂದು ಹೇಳಿದರು. ಮುಖ್ಯ ಕಾರ್ಯದರ್ಶಿ, ಆಯುಕ್ತರು ಹಾಗೂ ತೈಲ ಕಂಪನಿಗಳ ಮುಖ್ಯಸ್ಥರೊಂದಿಗೆ ಸುಮಾರು ಒಂದು ಗಂಟೆ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಗ್ರಾಹಕರು ವಿನಾಕಾರಣ ಆತಂಕಕ್ಕೆ ಒಳಗಾಗಬಾರದು. ಗ್ಯಾಸ್ ಡಬಲ್ ಬುಕ್ಕಿಂಗ್ ಮಾಡದೇ ಮಿತವಾಗಿ ಬಳಸುವಂತೆ ಮನವಿ ಮಾಡಲಾಗಿದೆ. ಗ್ಯಾಸ್ ಸಾಗಿಸುತ್ತಿದ್ದ ಹಡಗುಗಳ ಸಂಚಾರ ಆರಂಭವಾಗಿದ್ದು, ಪರಿಸ್ಥಿತಿ ಕ್ರಮೇಣ ಸುಧಾರಿಸುವ ನಿರೀಕ್ಷೆ ಇದೆ ಎಂದು ಹೇಳಿದರು.
ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು, ಏರ್‌ಲೈನ್ಸ್ ಹಾಗೂ ರೈಲ್ವೆ ಕ್ಯಾಂಟೀನ್‌ಗಳಿಗೆ ಶೇ.100 ರಷ್ಟು ಗ್ಯಾಸ್ ಪೂರೈಕೆ ಮಾಡಲು ಒಪ್ಪಿಗೆ ನೀಡಲಾಗಿದೆ. ಪ್ರತಿದಿನ ಸುಮಾರು 6500 ಸಿಲಿಂಡರ್ ಬಳಕೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಅದರಲ್ಲಿ 4200 ಸಿಲಿಂಡರ್ ಅವಶ್ಯಕ ಸೇವೆಗಳಿಗಾಗಿ ಪೂರೈಕೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.
ಆಸ್ಪತ್ರೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ಇಂದಿರಾ ಕ್ಯಾಂಟೀನ್‌ಗಳಿಗೆ 4200ಕ್ಕೂ ಹೆಚ್ಚು ಸಿಲಿಂಡರ್ ಪೂರೈಕೆ ಮಾಡಲಾಗುತ್ತದೆ. ಅಗತ್ಯ ಸೇವೆಗಳ ವಲಯಕ್ಕೆ ಸುಮಾರು 5200 ಸಿಲಿಂಡರ್ ಹಾಗೂ ಆಟೋಗಳಿಗೆ 2250 ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಹೋಟೆಲ್‌ಗಳಿಗೆ ಸದ್ಯಕ್ಕೆ ಗ್ಯಾಸ್ ಪೂರೈಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಹೋಟೆಲ್ ಮಾಲೀಕರು ತಾತ್ಕಾಲಿಕವಾಗಿ ಎಲೆಕ್ಟ್ರಿಕ್ ಸ್ಟವ್ ಬಳಕೆ ಮಾಡುವಂತೆ ಮನವಿ ಮಾಡಿದ್ದಾರೆ.