https://youtube.com/shorts/NQT6o3FTgxQ?si=QO7iNw2quSngYXpc
newsics.com
ಬೆಂಗಳೂರು : ಸಮರ್ಪಕ ಔಷಧ ಪೂರೈಕೆ, ಜ್ಯೇಷ್ಠತಾ ಪಟ್ಟಿ ಪರಿಷ್ಕರಣೆ, ವರ್ಗಾವಣೆ ನೀತಿ, ಖಾಲಿ ಹುದ್ದೆ ಭರ್ತಿ, ವೈದ್ಯರ ಮೇಲಿನ ಶೋಷಣೆ ತಪ್ಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ವೈದ್ಯರು ನಾಳೆಯಿಂದ (ಮಾ.11) ಮಾ. 15ರವರೆಗೆ ಹೊರರೋಗಿಗಳ (ಒಪಿಡಿ) ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಿದ್ದಾರೆ.
ಮಾರ್ಚ್ 11ರ ಬುಧವಾರದಿಂದ ಆರೋಗ್ಯ ಇಲಾಖೆ ಅಧಿಕಾರಿಗಳು, ವೈದ್ಯರು, ನೌಕರರು, ಹೊರ ರೋಗಿಗಳ ವಿಭಾಗ(ಒಪಿಡಿ) ಕರ್ತವ್ಯ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಿದ್ದಾರೆ.
ವೈದ್ಯರು, ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಬೇಡಿಕೆ ಈಡೇರಿಸುವಂತೆ ಎರಡು ವಾರದ ಹಿಂದೆಯೇ ಮುಷ್ಕರ ನಡೆಸುವ ನಿರ್ಧಾರ ಪ್ರಕಟಿಸಲಾಗಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಹಿನ್ನೆಲೆಯಲ್ಲಿ ಮುಷ್ಕರ ಕೈಗೊಳ್ಳಲಾಗಿದೆ.
ವೈದ್ಯರು, ವೈದ್ಯಕೀಯ ಸಿಬ್ಬಂದಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಮಾದರಿಯಲ್ಲಿ ವೇತನ ಕೊಡಬೇಕು. ಗುತ್ತಿಗೆ ವೈದ್ಯರು, ನೌಕರರು, ಎನ್.ಹೆಚ್.ಎಂ. ಗುತ್ತಿಗೆ ನೌಕರರಿಗೆ ಭದ್ರತೆ ನೀಡಿ ವೇತನ ಹೆಚ್ಚಳ ಮಾಡಬೇಕು. ಕೇಂದ್ರ ಪುರಸ್ಕೃತ ಯೋಜನೆಯಡಿ 6,000 ನೌಕರರಿಗೆ ವೇತನ ಭತ್ಯೆ ಕೊಡಬೇಕು. ಖಾಲಿ ಇರುವ 39 ಸಾವಿರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ಮಾಡಿ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು ಎಂದು ಒತ್ತಾಯಿಸಿ ಮುಷ್ಕರ ಕೈಗೊಳ್ಳಲಾಗಿದೆ.
ಮಾರ್ಚ್ 15 ರವರೆಗೆ ವೈದ್ಯರು ಮತ್ತು ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ತುರ್ತು ಕರ್ತವ್ಯದಲ್ಲಿ ಭಾಗವಹಿಸಲಿದ್ದಾರೆ.