Subscribe ನ್ಯೂಸಿಕ್ಸ್ ಕನ್ನಡ
newsics.com
ಮುಂಬೈ: ಕಳೆದ ತಿಂಗಳು ಜ. 28ರಂದು ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದಲ್ಲಿ ನಡೆದ, ಡಿಸಿಎಂ ಅಜಿತ್ ಪವಾರ್ ಸಾವಿಗೆ ಕಾರಣವಾದ ನಡೆದ ವಿಮಾನ ಅಪಘಾತ ಘಟನೆ ವಿಧ್ವಂಸಕ ಕೃತ್ಯ ಎಂದು ಮಂಗಳವಾರ(ಫೆ. 10) ಎನ್ಸಿಪಿ ಶಾಸಕ ರೋಹಿತ್ ಪವಾರ್ ಆರೋಪಿಸಿದ್ದಾರೆ. ಈ ಕುರಿತು ಬಹು ತನಿಖಾ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಅವರು, ಅಪಘಾತದ ದಿನದಂದು ಪೈಲಟ್ ಆಗಿದ್ದ ಕ್ಯಾಪ್ಟನ್ ಸುಮಿತ್ ಕಪೂರ್ ಈ ಹಿಂದೆ ಮದ್ಯಪಾನ ಮಾಡಿದ್ದಕ್ಕೆ ಮೂರು ವರ್ಷಗಳ ಕಾಲ ಅಮಾನತು ಮಾಡಲಾಗಿತ್ತು. ಅವರನ್ನು ಮತ್ತೆ ಪೈಲಟ್ ಆಗಿ ಕಳುಹಿಸಲಾಗಿದೆ. ಬುಕಿಂಗ್ ಮಾಡಿದ ವಿಎಸ್ಆರ್ ಕಂಪನಿ, ನಿರ್ವಹಣಾ ಕಂಪನಿ ಆರೋ ಹಾಗೂ ಪೈಲಟ್ ಸುಮಿತ್ ಕಪೂರ್ ಬಗ್ಗೆ ಗಂಭೀರ ಅನುಮಾನಗಳಿವೆ ಎಂದು ಹೇಳಿದ್ದಾರೆ.
ಇದು ಕೇವಲ ಅಪಘಾತ ಎಂದು ನಾವು ನಂಬುವುದಿಲ್ಲ. ವಿಧ್ವಂಸಕ ಕೃತ್ಯವನ್ನು ಶಂಕಿಸಲು ಅವಕಾಶವಿದೆ. ಅಪರಾಧ ತನಿಖಾ ಇಲಾಖೆ(ಸಿಐಡಿ) ಘಟನೆಯ ತನಿಖೆಗೆ ಸಂಪೂರ್ಣ ಅಧಿಕಾರ ಹೊಂದಿಲ್ಲ. ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ, ನಾಗರಿಕ ವಿಮಾನಯಾನ ಸುರಕ್ಷತೆಗಾಗಿ ವಿಚಾರಣಾ ಮತ್ತು ವಿಶ್ಲೇಷಣೆ ಬ್ಯೂರೋ, ಯುಕೆ ಮೂಲದ ವಾಯು ಅಪಘಾತ ತನಿಖಾ ಶಾಖೆ (ಎಎಐಬಿ) ಸೇರಿದಂತೆ ಬಹು ತಜ್ಞ ಸಂಸ್ಥೆಗಳಿಂದ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.