https://youtube.com/shorts/74VSpekXhn4?si=vijWxjVUFibUVb68
Subscribe ನ್ಯೂಸಿಕ್ಸ್ ಕನ್ನಡ
newsics.com
ಬೆಂಗಳೂರು : ಆರ್‌ಎಸ್‌ಎಸ್ ಹಿಂದೆ ಬಹುದೊಡ್ಡ ಅಕ್ರಮ ಹಣ ವರ್ಗಾವಣೆ ದಂಧೆ (ಮನಿ ಲಾಂಡರಿಂಗ್) ಇದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಆರೋಪಿಸಿದ್ದಾರೆ.
ಭಾನುವಾರ ನಗರದ ಗಾಂಧಿ ಭವನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಹರ್ನಿಶಿ ಪ್ರಕಾಶನ ಪ್ರಕಟಿಸಿರುವ ಪತ್ರಕರ್ತ ಇರ್ಷಾದ್ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ-ಕಣ್ಣೀರು’ (ಮತೀಯ ದ್ವೇಷದ ಬೆಂಕಿಯಲ್ಲಿ ನಲುಗಿದ ಬದುಕುಗಳು) ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಾ ಸಂಘ (ಆರ್‌ಎಸ್‌ಎಸ್) ಒಂದು ದೆವ್ವವಾದರೆ, ಬಿಜೆಪಿ ಅದರ ನೆರಳು. ನಾವು ನೆರಳಿನ ಜೊತೆಗೆ ಗುದ್ದಾಡುತ್ತಿದ್ದೇವೆ. ದೆವ್ವದ ಜೊತೆ ಗುದ್ದಾಡಿದರೆ ದೇಶ ಉದ್ಧಾರವಾಗುತ್ತದೆ ಎಂದಿದ್ದಾರೆ.
‘ನಾನು ಈಗ ಆರ್‌ಎಸ್‌ಎಸ್ ಬಗ್ಗೆ ಸ್ವಲ್ಪ ಆಳವಾಗಿ ಅಧ್ಯಯನ ಮಾಡುತ್ತಿದ್ದೇನೆ. ಆರ್‌ಎಸ್‌ಎಸ್‌ನವರಿಗೆ ಹಣ ಎಲ್ಲಿಂದ ಬರುತ್ತದೆ ಎಂದು ಕೇಳಿದರೆ ಅವರಲ್ಲಿ ಉತ್ತರವೇ ಇಲ್ಲ. ಆರ್‌ಎಸ್‌ಎಸ್ ಅನ್ನು ನೋಂದಣಿ ಮಾಡಿಸಬೇಕು ಎಂದು ಹೇಳಿದರೆ, ‘ನೋಂದಣಿ ಮಾಡಿಸುವ ಅಗತ್ಯವಿಲ್ಲ, ನಮ್ಮದು ವ್ಯಕ್ತಿಗಳ ಸಂಸ್ಥೆ’ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಹೇಳುತ್ತಾರೆ.
ಬೆಂಗಳೂರು ಕ್ಲಬ್ ಸಹ ವ್ಯಕ್ತಿಗಳ ಸಂಸ್ಥೆ. ಅದು ಸಹ ತೆರಿಗೆ ಮತ್ತು ಸಂವಿಧಾನದ ವ್ಯಾಪ್ತಿಗೆ ಬರುತ್ತದೆ. ನಾನು ಹೇಳುತ್ತಿದ್ದೇನೆ ನೋಡಿ, ಇವತ್ತಲ್ಲ ನಾಳೆ ಆರ್‌ಎಸ್‌ಎಸ್ ನೋಂದಣಿಯಾಗಲೇಬೇಕು. ನಾನು ಮಾಡಿಸುತ್ತೇನೆ. ನಾವು ಕಾನೂನು ಮತ್ತು ಸಂವಿಧಾನ ಪರವಾಗಿದ್ದರೆ ಹಾಗೂ ರಾಜಕೀಯ ಇಚ್ಛಾಶಕ್ತಿ ಹೊಂದಿದ್ದರೆ ಆರೆಸ್ಸೆಸ್ ಅಥವಾ ಎಸ್‌ಡಿಪಿಐ ಸೇರಿ ಯಾವುದೇ ಕೋಮುವಾದಿ ಸಂಘಟನೆಯನ್ನು ಬಗ್ಗಿಸಬಹುದು ಎಂದರು.