https://youtube.com/shorts/fUqc-HD4bis?si=BTQaSysLhuDRvAiz
Subscribe ನ್ಯೂಸಿಕ್ಸ್ ಕನ್ನಡ
newsics.com
ಕಲಬುರಗಿ: ನಗರದ ಸಬ್ ಅರ್ಬನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾನವೀಯತೆ ಮರೆತ ಘಟನೆಯೊಂದು ನಡೆದಿದ್ದು, ಚಿಂದಿ ಆಯುವ ಮಹಿಳೆಯೊಬ್ಬರ ಮೇಲೆ ಅನ್ಯಕೋಮಿನ ಯುವಕರ ತಂಡವೊಂದು ಅತ್ಯಾಚಾರಕ್ಕೆ ಯತ್ನಿಸಿರುವ ಆರೋಪ ಕೇಳಿಬಂದಿದೆ.
ನಗರದ ಹೊರವಲಯದಲ್ಲಿ ಎಂದಿನಂತೆ ಚಿಂದಿ ಆಯುತ್ತಿದ್ದ ಮಹಿಳೆಯನ್ನು ಕಂಡ ಯುವಕರ ಗುಂಪು, ಆಕೆಯನ್ನು ಏಕಾಏಕಿ ಕಾರಿನಲ್ಲಿ ಹೊತ್ತೊಯ್ಯಲು ಯತ್ನಿಸಿದೆ. ಮಹಿಳೆಯ ಕೈ ಹಿಡಿದು ಬಲವಂತವಾಗಿ ಎಳೆದಾಡಿದ ಕಿರಾತಕರು, ಅತ್ಯಾಚಾರ ಎಸಗಲು ಸಂಚು ರೂಪಿಸಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ಮಹಿಳೆಯು ಪ್ರಾಣಭಯದಿಂದ ಜೋರಾಗಿ ಕಿರುಚಾಡತೊಡಗಿದ್ದಾರೆ. ಇದರಿಂದ ಗಾಬರಿಗೊಂಡ ಯುವಕರ ಗ್ಯಾಂಗ್, ಮಹಿಳೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದೆ.
ಯುವಕರ ಹಲ್ಲೆಯಿಂದಾಗಿ ಮಹಿಳೆಯು ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಅವರನ್ನು ನಗರದ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿದೆ. ಸದ್ಯ ಮಹಿಳೆಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.