Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೀದರ್: ಕಾಯಿಲೆಯಿಂದ ಬಳಲುತ್ತಿದ್ದ ಮಾಜಿ ಸಚಿವ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಮಾಜಿ ಅಧ್ಯಕ್ಷ, ಶತಾಯುಷಿ ಭೀಮಣ್ಣ ಖಂಡ್ರೆ (102) ಶುಕ್ರವಾರ ಬೀದರ್ ನಗರದ ಸ್ವಗೃಹದಲ್ಲಿ ನಿಧನರಾದರು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಜೀವ ರಕ್ಷಕ ವೆಂಟಿಲೇಟರ್ ಮೂಲಕ ಒಂದು ವಾರ ಬೀದರ್ ನಗರದ ಗುದಗೆ ಮಲ್ಟಿ ಸ್ಪೆಷಾಲಿಟಿ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ನಂತರ ಆರೋಗ್ಯದಲ್ಲಿ ಸತತ ಏರುಪೇರಾಗುತ್ತಿದ್ದ ಕಾರಣ ಜನವರಿ 12ರ ಸೋಮವಾರ ಅವರನ್ನು ನಗರದಲ್ಲಿದ್ದ ಮನೆಗೆ ಕರೆತರಲಾಗಿತ್ತು. ಮನೆಯಲ್ಲಿಯೇ ವೈದ್ಯರ ತಂಡದಿಂದ ಅವರನ್ನು ನೋಡಿಕೊಳ್ಳಲಾಗುತ್ತಿತ್ತು. ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಕುರಿತು ಮಗ, ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾಹಿತಿ ನೀಡಿದ್ದರು.
ಆದರೆ ಶುಕ್ರವಾರ ಆರೋಗ್ಯದಲ್ಲಿ ದಿಢೀರ್ ಏರುಪೇರು ಉಂಟಾಗಿ ರಾತ್ರಿ ಕೊನೆಯುಸಿರೆಳೆದರು. ಅವರ ಅಂತ್ಯಕ್ರಿಯೆ ಶನಿವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಭೀಮಣ್ಣ ಖಂಡ್ರೆ ಅವರು ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಆರಂಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು.
ಭೀಮಣ್ಣ ಖಂಡ್ರೆಯವರಿಗೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಇಬ್ಬರು ಪುತ್ರರು, ಐವರು ಪುತ್ರಿಯರು ಇದ್ದಾರೆ. ಪತ್ನಿ ಲಕ್ಷ್ಮೀಬಾಯಿ ಖಂಡ್ರೆ, ಗಂಡು ಮಕ್ಕಳ ಪೈಕಿ ಹಿರಿಯ ಮಗ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಆವರು ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದಾರೆ.