Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಖಮ್ಮಮ್: ಯಾರಿಗಾದರೂ ಅನಾರೋಗ್ಯವಿದೆ ಅಥವಾ ಅಪಘಾತವಾಗಿದೆ ರಕ್ತದಾನ ಮಾಡಿ ಎಂದು ಕೇಳಿದರೂ ಒಪ್ಪದ ಅನೇಕರಿದ್ದಾರೆ. ಆದರೆ, ಇಲ್ಲಿ ನಾಯಿಯೊಂದು ತನ್ನ ರಕ್ತದಾನವನ್ನು ಮಾಡಿ ಮನುಷ್ಯರಿಗೇ ಮಾದರಿಯಾಗಿದೆ. ಇಷ್ಟು ದಿನ ನಿಯತ್ತಿಗೆ ಮಾತ್ರ ನಾಯಿ ಹೆಸರೇಳುತ್ತಿದ್ದವರು, ರಕ್ತದಾನ ಬಗ್ಗೆಯೂ ಮಾತನಾಡಬಹುದು.
ಹೌದು ಖಮ್ಮಮ್‌ನ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಹುಲಿ ಎಂದು ಕರೆಯಲ್ಪಡುವ ನಾಯಿ ತುರ್ತು ಸಂದರ್ಭಗಳಲ್ಲಿ ರಕ್ತದಾನ ಮಾಡುವ ಮೂಲಕ ಇತರ ಅನೇಕ ಪ್ರಾಣಿಗಳ ಜೀವಗಳನ್ನು ಉಳಿಸಿ ಮೆಚ್ಚುಗೆಗೆ ಪಾತ್ರವಾಗಿದೆ.
ಇಲ್ಲಿಯವರೆಗೆ ಈ ಶ್ವಾನವು ಇತರ ಪ್ರಾಣಿಗಳಿಗೆ ಅಗತ್ಯವಿದ್ದಾಗ ಏಳು ಬಾರಿ ರಕ್ತದಾನ ಮಾಡಿದೆ. ತನ್ನ ಸೌಮ್ಯ ಸ್ವಭಾವ, ನಡವಳಿಕೆಯಿಂದ ಇಲ್ಲಿನ ಪಶವೈದ್ಯಕೀಯ ಆಸ್ಪತ್ರೆಯಲ್ಲಿ ವಾಸಿಸುತ್ತಿದೆ. ಶ್ವಾನವು ಉತ್ತಮ ಆರೋಗ್ಯ ಹೊಂದಿರುವ ಕಾರಣ, ಅದು ಪರಿಪೂರ್ಣ ರಕ್ತದಾನಿಯಾಗಲು ಸಾಧ್ಯವಾಗಿದೆ.
ಒಂದು ವರ್ಷದ ಹಿಂದೆ, ನಗರದ ಜಿಲ್ಲಾ ಪಶುವೈದ್ಯಕೀಯ ಆಸ್ಪತ್ರೆಯ ಬಳಿ ಅನಾರೋಗ್ಯಕ್ಕೆ ತುತ್ತಾಗಿ ದುರ್ಬಲ ಸ್ಥಿತಿಯಲ್ಲಿ ಈ ನಾಯಿ ಕಂಡುಬಂದಿತು. ಕೆಟ್ಟ ಸ್ಥಿತಿಯಲ್ಲಿರುವುದನ್ನು ನೋಡಿದ ಆಸ್ಪತ್ರೆ ಸಿಬ್ಬಂದಿ ಅದನ್ನು ಕರೆತಂದು ವೈದ್ಯಕೀಯ ಆರೈಕೆ ಒದಗಿಸಿದರು. ಸರಿಯಾದ ಚಿಕಿತ್ಸೆ, ಪೋಷಣೆ ಮತ್ತು ನಿಗಾ ವಹಿಸಿದ ಬಳಿಕ ನಾಯಿ ಕ್ರಮೇಣ ಚೇತರಿಸಿಕೊಂಡಿತು.
ಆಶ್ಚರ್ಯಕರ ಸಂಗತಿಯೆಂದರೆ ಶ್ವಾನವು ಚೇತರಿಸಿಕೊಂಡ ಬಳಿಕ ಆಸ್ಪತ್ರೆಯಿಂದ ಅದು ತೆರಳಲಿಲ್ಲ. ಬದಲಿಗೆ, ಅದು ಆಸ್ಪತ್ರೆಯನ್ನೇ ತನ್ನ ವಾಸಸ್ಥಾನವನ್ನಾಗಿ ಮಾಡಿಕೊಂಡಿತು. ಅದನ್ನು ರಕ್ಷಿಸಿದ ವೈದ್ಯರು, ದಾದಿಯರು ಮತ್ತು ಸಹಾಯಕ ಸಿಬ್ಬಂದಿಯೊಂದಿಗೆ ನಿಕಟ ಸಂಬಂಧ ಬೆಳೆಸಿಕೊಂಡಿತು. ಪಶುವೈದ್ಯಕೀಯ ತಂಡವು ಈ ನಾಯಿಗೆ ಹುಲಿ (ಪುಲಿ) ಎಂದು ಹೆಸರಿಟ್ಟರು.
ಆಸ್ಪತ್ರೆಯ ಆವರಣದಲ್ಲಿ ವಾಸಿಸುವ ಶ್ವಾನಕ್ಕೆ ಇಲ್ಲಿನ ಸಿಬ್ಬಂದಿ ಆಹಾರ, ಆರೈಕೆ ಮಾಡುತ್ತಿದ್ದಾರೆ.