Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಚಳಿ ಇನ್ನೂ ಹೋಗಿಲ್ಲವೆಂದು ರಸ್ತೆ ಪಕ್ಕ ಬಾಯ್ಲ್ಡ್ ಎಗ್, ಆಮ್ಲೆಟ್, ಹಾಫ್‌ಬಾಯ್ಲ್ ತಿನ್ನಲು ಹೋಗುತ್ತೀರಾ? ನಿಮ್ಮ ಮೈ ಬೆಚ್ಚಗಾಗುವ ಜೊತೆಗೆ ಕಿಸೆಯ ಬಿಸಿಯೂ ಏರುವುದು ಖಚಿತ. ಹೌದು! ಕೋಳಿಗಳಿಗೆ ನೀಡುವ ಆಹಾರದ ಬೆಲೆ ದುಬಾರಿ ಹಾಗೂ ಚಳಿಯ ಹಿನ್ನೆಲೆಯಲ್ಲಿ ಮೊಟ್ಟೆಯ ದರ ಕಳೆದೊಂದು ವಾರದಿಂದ ಏರಿಳಿತ ಕಾಣುತ್ತಿದೆ. ಸಾಮಾನ್ಯವಾಗಿ ಚಳಿಗಾಲದಲ್ಲಿ ಮೊಟ್ಟೆ ಬೆಲೆ ಹೆಚ್ಚಿರುತ್ತದೆ.
ಕ್ರಿಸ್ಮಸ್, ಹೊಸ ವರ್ಷ ಬೆಂಗಳೂರಿನಲ್ಲಿ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಮೊಟಟೆಯ ಕೊರತೆ ಎದುರಾಗಿದ್ದು, ಇದರಿಂದ ಮೊಟ್ಟೆ ಬೆಲೆ ಏರಿಕೆ ಆಗಿದೆ.
ಬೆಂಗಳೂರಿನಲ್ಲಿ ಮೊಟ್ಟೆ ಪೂರೈಕೆ ಕಡಿಮೆಯಾಗಿದೆ. ಜೊತೆಗೆ ಕಳೆದ ವರ್ಷ ಹಕ್ಕಿ ಜ್ವರ ಬಂದಿದ್ದರಿಂದ ಕೋಳಿಗಳ ಸಾಕಾಣಿಕೆ ಕಡಿಮೆಯಾಗಿತ್ತು. ಈ ಎಲ್ಲಾ ಕಾರಣಗಳಿಂದ ರಾಜ್ಯದಲ್ಲಿ, ಅದರಲ್ಲೂ ಬೆಂಗಳೂರಲ್ಲಿ ಬೇಡಿಕೆಗೆ ತಕ್ಕಂತೆ ಮೊಟ್ಟೆಗಳ ಪೂರೈಕೆಯಾಗುತ್ತಿಲ್ಲ. ಹೀಗಾಗಿ ಮೊಟ್ಟೆಗಳ ಕೊರತೆ ಉಂಟಾಗಿದೆ. ಸದ್ಯ ಪ್ರತಿನಿತ್ಯ ಬೆಂಗಳೂರಲ್ಲಿ 1.10 ಕೋಟಿ ಮೊಟ್ಟೆಗಳಿಗೆ ಬೇಡಿಕೆ ಇದೆ. ಆದರೆ 30 ರಿಂದ 40 ಲಕ್ಷ ಮೊಟ್ಟೆಗಳ ಕೊರತೆ ಎದುರಾಗಿದೆ ಎಂದು ಕರ್ನಾಟಕ ಪೌಲ್ಟ್ರಿ ಟ್ರೇಡರ್ಸ್ ಅಸೋಸಿಯೇಷನ್ ಅಧ್ಯಕ್ಷ ಕೆ.ಎನ್ ನಾಗರಾಜ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ 5 ರೂಪಾಯಿ ಇದ್ದ ಮೊಟ್ಟೆ ಬೆಲೆ ಇದೀಗ ದುಬಾರಿಯಾಗಿದ್ದು, ಒಂದು ಮೊಟ್ಟೆಗೆ 7 ರಿಂದ 8 ರೂಪಾಯಿ ಆಗಿದೆ. ತಮಿಳುನಾಡಿನ ನಾಮಕಲ್ನಿಂದ ಪ್ರತಿನಿತ್ಯ 79 ಲಕ್ಷ ಮೊಟ್ಟೆ ಪೂರೈಕೆಯಾಗುತ್ತಿತ್ತು. ಸದ್ಯ ಪೂರೈಕೆ ಕಡಿಮೆಯಾಗಿದೆ. ಹೀಗಾಗಿ ಕರ್ನಾಟಕಕ್ಕೆ ಮೊಟ್ಟೆ ಪೂರೈಕೆ ಸಮರ್ಪಕವಾಗಿ ಆಗುತ್ತಿಲ್ಲ.