Subscribe ನ್ಯೂಸಿಕ್ಸ್ ಕನ್ನಡ NewsicsKannada/YouTube
newsics.com
ಬೆಂಗಳೂರು: ಕರ್ನಾಟಕದ ರಾಜಭವನವನ್ನು ಇನ್ನು ಮುಂದೆ ‘ಲೋಕಭವನ, ಕರ್ನಾಟಕ’ ಎಂದು ಕರೆಯಲಾಗುವುದು ಎಂದು ರಾಜ್ಯಪಾಲರ ಸಚಿವಾಲಯ ಬುಧವಾರ ತಿಳಿಸಿದೆ.
ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಅನುಮೋದನೆಯ ನಂತರ ಈ ಬದಲಾವಣೆ ತಕ್ಷಣದಿಂದ ಜಾರಿಗೆ ಬರಲಿದೆ ಎಂದು ರಾಜ್ಯಪಾಲರ ಸಚಿವಾಲಯ ಹೊರಡಿಸಿದ ಅಧಿಸೂಚನೆ ತಿಳಿಸಿದೆ.
“ಭಾರತ ಸರ್ಕಾರದ ಗೃಹ ಸಚಿವಾಲಯದ ಸಂವಹನದ ಅನುಸಾರವಾಗಿ … ದಿನಾಂಕ 25-11-2025 ಮತ್ತು ಕರ್ನಾಟಕ ರಾಜ್ಯಪಾಲರ ಅನುಮೋದನೆಯ ಪ್ರಕಾರ, ‘ರಾಜಭವನ, ಕರ್ನಾಟಕ’ದ ಹೆಸರನ್ನು ಮಾರ್ಪಡಿಸಿ ಲೋಕಭವನ, ಕರ್ನಾಟಕ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಈ ಮೂಲಕ ತಿಳಿಸಲಾಗಿದೆ” ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಭವಿಷ್ಯದ ಎಲ್ಲಾ ಪತ್ರವ್ಯವಹಾರಗಳಲ್ಲಿ “ರಾಜಭವನ ಕರ್ನಾಟಕ” ಅನ್ನು “ಲೋಕಭವನ ಕರ್ನಾಟಕ” ಎಂದು ಉಲ್ಲೇಖಿಸಲು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳ ಮುಖ್ಯಸ್ಥರಿಗೆ ಈ ಮೂಲಕ ಸೂಚಿಸಲಾಗಿದೆ.
ರಾಜಭವನವನ್ನು ಮೊದಲಿಗೆ ರೆಸಿಡೆನ್ಸ್ ಎಂದು ಕರೆಯಲಾಗುತ್ತಿತ್ತು. 1947ರಲ್ಲಿ ರೆಸಿಡೆನ್ಸಿಯ ಅಸ್ತಿತ್ವವು ಕೊನೆಗೊಂಡಿತು. ಸಂವಿಧಾನವು ರಾಜಪ್ರಮುಖ ಹುದ್ದೆಯನ್ನು ಸೃಜಿಸಿತು. ಅದು ಮುಂದೆ ರಾಜ್ಯಪಾಲ ಹುದ್ದೆಯಾಯಿತು. ಹಾಗಾಗಿ, ಬೆಂಗಳೂರಿನಲ್ಲಿನ ರೆಸಿಡೆನ್ಸಿ ಆವರಣವನ್ನು ‘ರಾಜ ಭವನ’ ಎಂದು ಕರೆಯಲಾಯಿತು.
ಕ್ರಿ.ಶ 1834 ರಿಂದ 1861ರ ವರೆಗೆ ಬ್ರಿಟಿಷರ ಮೈಸೂರು ಪ್ರಾಂತ್ಯದ ಕಮೀಷನರ್ ಆಗಿದ್ದಂಥ ಸರ್. ಮಾರ್ಕ್ ಕಬ್ಬನ್‍ರವರು ಹಣ ನೀಡಿ ಈ ಸ್ವತ್ತನ್ನು ಖರೀದಿಸಿದರು. 1840 – 1842ರ ಅವಧಿಯಲ್ಲಿ ತಮ್ಮ ಅಭಿರುಚಿ ಮತ್ತು ಅವಶ್ಯಕತೆಗಳಿಗನುಗುಣವಾಗಿ ತಮ್ಮ ಸ್ವಂತ ಹಣದಿಂದ ಔಟ್‍ಹೌಸ್ ಮತ್ತು ಕುದುರೆ ಲಾಯಗಳೊಂದಿಗೆ ಈ ಬಂಗಲೆಯನ್ನು ಕಟ್ಟಿಸಿದರು. 1840ರಲ್ಲಿ ಕಬ್ಬನ್ ಈ ಬಂಗಲೆಯನ್ನು ಕಟ್ಟಿಸಿದಾಗ, ಈ ಪ್ರದೇಶದಲ್ಲಿ ಯಾವುದೇ ಕಟ್ಟಡಗಳು ಇರಲಿಲ್ಲ. ಇದು, ಈಗ ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ಮಹಾನಗರದ ಹೃದಯ ಭಾಗವಾಗಿದೆ.