newsics.com
ಬೆಂಗಳೂರು: ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್‌ನಲ್ಲಿ ಯುವತಿಯೊಬ್ಬಳಿಗೆ ಚಾಲಕ ಮತ್ತು ನಿರ್ವಾಹಕ ಇಬ್ಬರೂ ಲೈಂಗಿಕ ಕಿರುಕುಳ ನೀಡಿದ್ದು, ಯುವತಿಯ ಕುಟುಂಬಸ್ಥರು ಬಸ್ ಅಡ್ಡಗಟ್ಟಿ ಇಬ್ಬರಿಗೂ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಟ್ರಾನ್ಸ್ ಇಂಡಿಯಾ ಎಂಬ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಯುವತಿಯೊಬ್ಬಳು ಹೈದರಾಬಾದ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದಳು.
ರಾತ್ರಿ ವೇಳೆ, ಚಾಲಕ ಮತ್ತು ನಿರ್ವಾಹಕ ಯುವತಿಯಿಂದ ಮೊಬೈಲ್ ಕಸಿದುಕೊಂಡಿದ್ದಾರೆ. ಮೊಬೈಲ್ ವಾಪಸ್ ನೀಡಬೇಕಿದ್ದರೆ ‘ಕಿಸ್ ಕೊಡು’ ಎಂದು ಪೀಡಿಸಿದ್ದಾರೆ. ಇದರಿಂದ ಆತಂಕಗೊಂಡ ಯುವತಿ ಹೇಗೋ ಅವರ ಕೈಯಿಂದ ತಪ್ಪಿಸಿಕೊಂಡು ತನ್ನ ಮೊಬೈಲ್ ವಾಪಸ್ ಪಡೆದಿದ್ದಾಳೆ. ತಕ್ಷಣ ತನ್ನ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ.
ಯುವತಿಯ ಮಾಹಿತಿ ಆಧರಿಸಿ ಕುಟುಂಬಸ್ಥರು ಚಾಲುಕ್ಯ ಸರ್ಕಲ್ ಬಳಿ ಬಸ್ ಅಡ್ಡ ಹಾಕಿ ನಿಲ್ಲಿಸಿದ್ದಾರೆ. ನಂತರ ಬಸ್‌ನಲ್ಲಿದ್ದ ಚಾಲಕ ಮತ್ತು ನಿರ್ವಾಹಕನನ್ನು ಕೆಳಗಿಳಿಸಿ ಅವರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಸಾರ್ವಜನಿಕರ ಸಮ್ಮುಖದಲ್ಲಿ ಬಟ್ಟೆ ಬಿಚ್ಚಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಬಳಿಕ ಪೊಲೀಸರಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಧಾನಸೌಧ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಇಬ್ಬರನ್ನೂ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.