newsics.com
ಬೆಂಗಳೂರು : ಆನ್ ಲೈನ್ ನಲ್ಲಿ ಫ್ರೀ ಫೈರ್ ಗೇಮ್ ಚಟಕ್ಕೆ ಬಿದ್ದಿದ್ದ ಬಾಲಕನನ್ನು ಸ್ವಂತ ಸೋದರ ಮಾವನೇ ಬರ್ಬರವಾಗಿ ಹತ್ಯೆಗೈದಿರುವ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಅಮೋಘ ಕೀರ್ತಿ (14) ಕೊಲೆಯಾದ ಬಾಲಕನಾಗಿದ್ದು, ಸೋದರ ಮಾವ ನಾಗಪ್ರಸಾದ್ (50) ನನ್ನು ಪೊಲೀಸರು ಬಂಧಿಸಿದ್ದಾರೆ.
ನಾಗಪ್ರಸಾದ್ ಸಹೋದರಿ ಶಿಲ್ಪಾಳ ಮಗನಾಗಿದ್ದ ಬಾಲಕ ಅಮೋಘ ಕೀರ್ತಿ ಕಳೆದು ಎಂಟು ತಿಂಗಳಿಂದ ಮಾವನ ಜೊತೆಯಲ್ಲೇ ವಾಸವಾಗಿದ್ದ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿ ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಲ್ಲಿ ಇಬ್ಬರೂ ವಾಸಿಸುತ್ತಿದ್ದರು. ಈ ವೇಳೆ ಅಮೋಘ ಕೀರ್ತಿ ಫ್ರೀಫೈರ್ ಗೇಮ್ ಚಟಕ್ಕೆ ಬಿದ್ದಿದ್ದ. ಹಣಕ್ಕಾಗಿ ತನ್ನ ಮಾವನನ್ನು ಪೀಡಿಸುತ್ತಿದ್ದ. ಅಮೋಘ ಕೀರ್ತಿ ಸದಾ ಗೇಮ್ಸ್ ಆಡಿಕೊಂಡಿರುವುದು ಹಾಗೂ ದುಡ್ಡು ಕಳೆಯುತ್ತಿರುವುದರಿಂದ ಮಾವ ನಾಗಪ್ರಸಾದ್ ಬೇಸತ್ತಿದ್ದ.
ಕಳೆದ ಸೋಮವಾರ ಬೆಳಗಿನ ಜಾವ 4.30 ರ ವೇಳೆಯಲ್ಲಿ ನಾಗಪ್ರಸಾದ್ ಅಮೋಘ ಕೀರ್ತಿಯನ್ನು ಕತ್ತು ಸೀಳಿ ಹತ್ಯೆಗೈದಿದ್ದ. ನಂತರ ತಾನೂ ಸಹ ನಂತರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ಆದರೆ ಧೈರ್ಯ ಸಾಲದೇ ಪರಾರಿಯಾಗಿದ್ದ. ಬಾಲಕನ ಶವ ಮನೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದರ ಬಗ್ಗೆ ದೂರು ದಾಖಲಿಸಕೊಂಡಿದ್ದ ಪೊಲೀಸರು ತನಿಖೆ ಆರಂಭಿಸಿದ್ದರು.
ಎಲ್ಲಿಗೂ ಹೋಗಲು ಹಣವಿಲ್ಲದೆ ಮೆಜೆಸ್ಟಿಕ್ ನಲ್ಲಿ ಮೂರು ದಿನ ಕಾಲಕಳೆದಿದ್ದ ನಾಗಪ್ರಸಾದ್ ಬಳಿಕ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ತಾನೇ ಸ್ವತಃ ಸೋದರಳಿಯನ ಕೊಲೆ ಮಾಡಿರುವುದಾಗಿ ನಾಗಪ್ರಸಾದ್ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು ನಾಗಪ್ರಸಾದ್ ನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿ ನ್ಯಾಯಾಂಗವಶಕ್ಕೆ ಪಡೆದಿದ್ದಾರೆ.
ಬರ್ತ್ ಡೇ ಪಾರ್ಟಿಗೆಂದು ವಿದ್ಯಾರ್ಥಿಗಳನ್ನು ಹೋಟೆಲ್ ಗೆ ಕರೆದೊಯ್ದು ಮೋಜು-ಮಸ್ತಿ; ಹಾಸ್ಟೆಲ್ ವಾರ್ಡನ್ ಗೆ ನೋಟಿಸ್