newsics.com
ಇತ್ತೀಚಿಗೆ ವಿಮಾನ ದುರಂತಗಳ ಸರಣಿ ಜನರನ್ನು ಬೆಚ್ಚಿಬೀಳಿಸಿದೆ. ಅಹಮದಾಬಾದ್ ವಿಮಾನ ದುರಂತ ನಂತರ ಸಾಲು ಸಾಲು ವಿಮಾನ ದುರಂತ ಮತ್ತು ವಿಮಾನದಲ್ಲಿ ತಾಂತ್ರಿಕ ದೋಷ ಸಮಸ್ಯೆಗಳು ಕಂಡುಬರುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಇದೀಗ ಮತ್ತೊಂದು ವಿಮಾನ ದುರಂತ ನಡೆದಿದೆ.
ವೈದ್ಯಕೀಯ ಸಾರಿಗೆ ವಿಮಾನ ಲ್ಯಾಂಡಿಂಗ್ ವೇಳೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ನಾಲ್ವರು ವೈದ್ಯಕೀಯ ಸಿಬ್ಬಂದಿ ಸಜೀವದಹನವಾಗಿರುವ ಘಟನೆ ಅಮೆರಿಕದ ನವಾಜೋ ರಾಷ್ಟ್ರದ ಚಿನ್ಲೆ ಮುನ್ಸಿಪಲ್ ವಿಮಾನ ನಿಲ್ದಾಣದ ಸಮೀಪ ಆಗಸ್ಟ್ 5 ರಂದು ನಡೆದಿದೆ.
ನ್ಯೂ ಮೆಕ್ಸಿಕೋದ ಅಲ್ಬುಕರ್ಕ್‌ನ ಸಿಎಸ್‌ಐ ಏವಿಯೇಷನ್ ನಿರ್ವಹಿಸುತ್ತಿದ್ದ ಬೀಚ್‌ಕ್ರಾಫ್ಟ್ 300 ವಿಮಾನವು ಚಿನ್ಲೆ ಮುನ್ಸಿಪಲ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 12:40ರ ಸುಮಾರಿಗೆ ಇಳಿಯಲು ಪ್ರಯತ್ನಿಸುವ ವೇಳೆ ಪತನಗೊಂಡಿತು. ನವಾಜೋ ಪೊಲೀಸ್ ಇಲಾಖೆಯ ಪ್ರಕಾರ, ಈ ವಿಮಾನವು ಸ್ಥಳೀಯ ಆಸ್ಪತ್ರೆಯಿಂದ ರೋಗಿಯೊಬ್ಬರನ್ನು ಕರೆದೊಯ್ಯಲು ತೆರಳಿತ್ತು. ವಿಮಾನದಲ್ಲಿದ್ದ ಎಲ್ಲರೂ ವೈದ್ಯಕೀಯ ಸಿಬ್ಬಂದಿಯಾಗಿದ್ದರು ಎಂದು ನವಾಜೋ ರಾಷ್ಟ್ರದ ಅಧ್ಯಕ್ಷ ಬುಯು ನೈಗ್ರೆನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.