newsics.com
ನವದೆಹಲಿ: ಭಾರತದಿಂದ ಅಮೆರಿಕಕ್ಕೆ ಸ್ಮಾರ್ಟ್ಫೋನ್ಗಳು ಸರಬರಾಜಾಗುತ್ತಿರುವುದು ದಿನೇದಿನೇ ಹೆಚ್ಚುತ್ತಿದೆ. ಕೆನಾಲಿಸ್ ಎನ್ನುವ ರಿಸರ್ಚ್ ಕಂಪನಿಯ ವರದಿ ಪ್ರಕಾರ ಅಮೆರಿಕಕ್ಕೆ ಸ್ಮಾರ್ಟ್ಫೋನ್ಗಳನ್ನು ಸರಬರಾಜು ಮಾಡುವುದರಲ್ಲಿ ಚೀನಾವನ್ನು (China) ಭಾರತ ಹಿಂದಿಕ್ಕಿದೆ.
2025ರ ಜೂನ್ ಕ್ವಾರ್ಟರ್ನಲ್ಲಿ ಈ ದಾಖಲೆ ಆಗಿದೆ. ಇದರೊಂದಿಗೆ ಭಾರತವು ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್ಫೋನ್ ರಫ್ತು ಮಾಡುವ ದೇಶ ಎನಿಸಿದೆ.
ಆಯಪಲ್ ಕಂಪನಿಯ ಐಫೋನ್ಗಳು ಭಾರತದಲ್ಲಿ ಹೆಚ್ಚೆಚ್ಚು ತಯಾರಾಗುತ್ತಿದ್ದು, ಅಮೆರಿಕದ ಮಾರುಕಟ್ಟೆಗಳಿಗೆ ಮೇಡ್ ಇನ್ ಇಂಡಿಯಾ ಐಫೋನ್ಗಳನ್ನು ಆಯಪಲ್ ಒದಗಿಸುತ್ತಿದೆ.
ಕೆನಾಲಿಸ್ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ 2025ರ ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಅಮೆರಿಕ ಆಮದು ಮಾಡಿಕೊಂಡ ಸ್ಮಾರ್ಟ್ಫೋನ್ಗಳಲ್ಲಿ ಭಾರತದ ಪಾಲು ಶೇ. 44ರಷ್ಟಿದೆ. ಇದೇ ಅವಧಿಯಲ್ಲಿ ಮೇಡ್ ಇನ್ ಚೀನಾ ಫೋನ್ಗಳ ಪಾಲು ಶೇ. 25 ಮಾತ್ರವೇ. ಹಿಂದಿನ ವರ್ಷದ ಇದೇ ಕ್ವಾರ್ಟರ್ನಲ್ಲಿ ಅಮೆರಿಕಕ್ಕೆ ಸರಬರಾಜಾದ ಫೋನ್ಗಳಲ್ಲಿ ಚೀನಾ ಪಾಲು ಶೇ. 61 ಇತ್ತು. ಭಾರತದ ಪಾಲು ಶೇ. 13 ಮಾತ್ರವೇ ಇತ್ತು. ಈಗ ಒಂದು ವರ್ಷದ ಅಂತರದಲ್ಲಿ ಗಣನೀಯ ಬದಲಾವಣೆ ಆಗಿದೆ.
ಆಯಪಲ್ ಕಂಪನಿ ಭಾರತದಲ್ಲಿ ಐಫೋನ್ ತಯಾರಿಕೆಯನ್ನು ಗಣನೀಯವಾಗಿ ಹೆಚ್ಚಿಸಿದೆಯಾದರೂ ಅದರ ಹೊಚ್ಚಹೊಸ ಪ್ರೀಮಿಯಮ್ ಮಾಡಲ್ ಐಫೋನ್ 16 ಪ್ರೋ ಫೋನ್ಗಳನ್ನು ಈಗಲೂ ಚೀನಾದಲ್ಲೇ ತಯಾರಿಸಲಾಗುತ್ತಿದೆ. ಆದರೆ, ಐಫೋನ್-16ನ ಬೇಸ್ ಮಾಡಲ್ಗಳನ್ನು ಹೆಚ್ಚಾಗಿ ಭಾರತದಲ್ಲಿ ಅಸೆಂಬಲ್ ಮಾಡಿ ರಫ್ತು ಮಾಡಲಾಗುತ್ತಿದೆ. ಅಮೆರಿಕ ಹೆಚ್ಚು ಆಮದು ಮಾಡಿಕೊಳ್ಳುತ್ತಿರುವುದು ಈ ಬೇಸ್ ಮಾಡಲ್ಗಳನ್ನೇ.
ಆಯಪಲ್ ಮಾತ್ರವಲ್ಲ, ಸ್ಯಾಮ್ಸುಂಗ್ ಮತ್ತು ಮೋಟೊರೋಲಾ ಮೊದಲಾದ ಸ್ಮಾರ್ಟ್ಫೋನ್ ಕಂಪನಿಗಳೂ ಕೂಡ ಭಾರತದಲ್ಲಿ ತಯಾರಿಕೆ ಹೆಚ್ಚಿಸಿವೆ. ಮೊಟೊರೋಲಾದ ಪ್ರಮುಖ ಮ್ಯಾನುಫ್ಯಾಕ್ಚರಿಂಗ್ ಯೂನಿಟ್ಗಳು ಇರುವುದು ಚೀನಾದಲ್ಲಿ. ಸ್ಯಾಮ್ಸಂಗ್ನ ಹೆಚ್ಚಿನ ಫೋನ್ಗಳು ವಿಯೆಟ್ನಾಂನಲ್ಲಿ ತಯಾರಾಗುತ್ತವೆ. ಇದರ ಮಧ್ಯೆ ಭಾರತದಲ್ಲಿ ಇವು ನಿಧಾನವಾಗಿ ತಮ್ಮ ತಯಾರಿಕೆಯ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳುತ್ತಿವೆ.