newsics.com
ರಾಜ್ಯದಲ್ಲಿ ವಿಶೇಷವಾಗಿ ಹಾಸನ, ತುಮಕೂರು ಭಾಗಗಳಲ್ಲಿ ಕಳೆದ ಕೆಲವು ತಿಂಗಳಿಂದ ಹೃದಯಾಘಾತದಿಂದ ಸಂಭವಿಸುತ್ತಿರುವ ಸಾವಿನ ಪ್ರಕರಣಗಳ ರಾಜ್ಯದ ಜನರನ್ನುಆತಂಕಕ್ಕೆ ದೂಡಿದೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಕೆ.ಎಸ್. ರವೀಂದ್ರನಾಥ್ ಅವರ ನೇತೃತ್ವದಲ್ಲಿ 10 ಜನ ತಜ್ಞರನ್ನೊಳಗೊಂಡ ತಾಂತ್ರಿಕ ತಂಡವನ್ನು ರಚಿಸಿತ್ತು. ಈ ತಂಡ ಇದೀಗ ತನ್ನ ತನಿಖೆಯನ್ನು ಪೂರ್ಣಗೊಳಿಸಿ ಇಂದು ಸರ್ಕಾರಕ್ಕೆ ವರದಿ ಸಲ್ಲಿಸಲು ರೆಡಿಯಾಗಿದೆ.
ಇಂದು (ಜುಲೈ 10, 2025) ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಟೆಕ್ನಿಕಲ್ ತಂಡ ವರದಿಯನ್ನು ಸಲ್ಲಿಸಲಿದೆ. ಈ ವರದಿಯು ಹಾಸನದ ಸರಣಿ ಹೃದಯಾಘಾತದ ಕಾರಣಗಳನ್ನು ಗುರುತಿಸಿ, ತಡೆಗಟ್ಟುವ ಕ್ರಮಗಳ ಬಗ್ಗೆ ಸಲಹೆಗಳನ್ನು ನೀಡಲಿದೆ.
ತಜ್ಞರ ವರದಿಯಲ್ಲಿ ಹೃದಯಾಘಾತದಿಂದ ಸಾವಿಗೆ ಕಾರಣವೇನು?
ತಜ್ಞರ ತಂಡದ ಪ್ರಾಥಮಿಕ ವರದಿಯ ಪ್ರಕಾರ, ಹಾಸನದಲ್ಲಿ ಸಂಭವಿಸಿದ ಹೃದಯಾಘಾತದ ಸಾವುಗಳಿಗೆ ರೋಗಿಗಳ ನಿರ್ಲಕ್ಷ್ಯವೇ ಪ್ರಮುಖ ಕಾರಣವಾಗಿದೆ. ಬಹುತೇಕ ರೋಗಿಗಳು ಎದೆನೋವು ಅಥವಾ ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಗಂಭೀರವಾಗಿ ಪರಿಗಣಿಸದೆ, ಆಸ್ಪತ್ರೆಗೆ ತಡವಾಗಿ ದಾಖಲಾಗಿದ್ದಾರೆ. ಇದರಿಂದಾಗಿ “ಗೋಲ್ಡನ್ ಅವರ್” ಎಂದು ಕರೆಯಲ್ಪಡುವ ಕೃತಕ ಗಂಟೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಿಲ್ಲ. ಈ ನಿರ್ಲಕ್ಷ್ಯವು ಅನೇಕರ ಸಾವಿಗೆ ಕಾರಣವಾಗಿದೆ ಎಂದು ವರದಿ ತಿಳಿಸಿದೆ.
ಇದರ ಜೊತೆಗೆ, ಆಹಾರ ಪದ್ಧತಿಯೂ ಹೃದಯಾಘಾತದ ಪ್ರಕರಣಗಳಿಗೆ ಕಾರಣವಾಗಿದೆ. ಅತಿಯಾದ ತೈಲಯುಕ್ತ ಆಹಾರ, ಸಕ್ಕರೆಯಂಶದ ಆಹಾರ ಮತ್ತು ಸಂಸ್ಕರಿತ ಆಹಾರಗಳ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಿದೆ. ಅತಿಯಾದ ಧೂಮಪಾನ ಮತ್ತು ಮದ್ಯಪಾನವೂ ಈ ಸಾವುಗಳಿಗೆ ಕಾರಣವಾಗಿವೆ. ಒತ್ತಡದ ಜೀವನಶೈಲಿ, ಕಡಿಮೆ ದೈಹಿಕ ಚಟುವಟಿಕೆ ಮತ್ತು ಜೆನೆಟಿಕ್ ಅಂಶಗಳು ಕೂಡಾ ಹೃದಯಾಘಾತದ ಸಾಧ್ಯತೆಯನ್ನು ಹೆಚ್ಚಿಸಿವೆ ಎಂದು ವರದಿಯಲ್ಲಿ ತಿಳಿಸಿದೆ.