newsics.com
ಆಂಧ್ರಪ್ರದೇಶ: ಯುವತಿಯೊಬ್ಬಳು ಎರಡು ವರ್ಷದಲ್ಲಿ 12 ವಿಚ್ಛೇದಿತರನ್ನು ಮದುವೆಯಾಗಿ ವಂಚಿಸಿದ್ದಲ್ಲದೆ, ಸಂತ್ರಸ್ತರಿಂದ ಲಕ್ಷಾಂತರ ರೂ. ನಗದು, ಚಿನ್ನಾಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಕೊನಸೀಮಾ ಜಿಲ್ಲೆಯಲ್ಲಿ ನಡೆದಿದೆ.
ಈಕೆಯನ್ನು ಮದುವೆಯಾಗಿ ಮೋಸ ಹೋದ ಕೆಲವರು ಆಕೆಯ ಕಿರುಕುಳ ತಾಳಲಾರದೆ ಆತ್ಮಹತ್ಯೆಗೂ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಈ ಯುವತಿಗೆ ತನ್ನ ತಾಯಿಯೊಂದಿಗೆ ಸೇರಿ ಮದುವೆಯ ಹೆಸರಿನಲ್ಲಿ 12 ವಿಚ್ಛೇದಿತ ಜನರಿಗೆ ವಂಚನೆ ಮಾಡಿದ್ದಾಳೆ. ಸಂತ್ರಸ್ತರಿಂದ ಲಕ್ಷಾಂತರ ಹಣವನ್ನು ಸಂಗ್ರಹಿಸಿ ಕಿರುಕುಳ ನೀಡಿದ್ದಾಳೆ ಎಂದು ಆರೋಪಿಸಲಾಗಿದೆ. ಹಣ ಕೊಡದವರಿಗೆ ಸಾಕಷ್ಟು ಕಿರುಕುಳ ನೀಡಿದ್ದಾಳೆ ಎನ್ನಲಾಗಿದೆ. ಈ ಕಿರುಕುಳ ತಾಳಲಾರದೆ ಕೆಲವರು ಆತ್ಮಹತ್ಯೆಗೂ ಯತ್ನಿಸಿದ್ದರು ಎಂದು ತಿಳಿದುಬಂದಿದೆ.
ಸಂತ್ರಸ್ತರು ಎಸ್ಪಿ ಕಚೇರಿಯಲ್ಲಿ ದೂರು ನೀಡಿದ ನಂತರ ಈ ವಿಷಯ ಬೆಳಕಿಗೆ ಬಂದಿದೆ.
ಯುವತಿ ಎರಡು ವರ್ಷಗಳಲ್ಲಿ ಒಂದು ಡಜನ್ (12) ಬಾರಿ ಮದುವೆಯಾಗಿದ್ದಾಳೆ. ಯುವತಿಯ ತಾಯಿ ಕೂಡ ಈ ಮೋಸದ ವಿವಾಹ ದಂಧೆಯಲ್ಲಿ ಭಾಗಿಯಾಗಿದ್ದಾಳೆ.
ವಿಚ್ಛೇದಿತರನ್ನೇ ಗುರಿಯಾಗಿಸಿಕೊಂಡು ತಾಯಿ ಮತ್ತು ಮಗಳು 12 ಜನರನ್ನು ವಂಚಿಸಿದ್ದಾರೆ. ಇದಲ್ಲದೆ, ಈ ವಂಚನೆಗಳ ಬಗ್ಗೆ ಪ್ರಶ್ನಿಸಿದವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ಬಲಿಪಶುಗಳು ಡಾ. ಬಿ.ಆರ್. ಅಂಬೇಡ್ಕರ್ ಕೊನಸೀಮಾ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ದೂರು ದಾಖಲಿಸಿದ್ದಾರೆ.
ಕೊನಸೀಮಾ ಜಿಲ್ಲೆಯ ರಾಮಚಂದ್ರಪುರಂನ ಯುವತಿ, ಆಕೆಯ ತಾಯಿ ವೀರಲಕ್ಷ್ಮಿ ಮತ್ತು ಆಕೆಯ ತಂದೆ ಪಾತ್ರಧಾರಿ ರಾಮಕೃಷ್ಣ ಸೇರಿ ವಂಚನೆ ಎಸಗಿದ್ದಾರೆ ಎನ್ನಲಾಗಿದೆ. ಮದ್ದಲ ಶ್ರೀನಿವಾಸ್, ದುರ್ಗಾ ಮತ್ತು ಕಲ್ಯಾಣ್ ಸಹಾಯದಿಂದ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಗೋದಾವರಿ ಜಿಲ್ಲೆಯ ಪಾಲಕೊಲ್ಲು ಮತ್ತು ನರಸಪುರಂ ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಕೊವ್ವೂರಿನ ಸಂತ್ರಸ್ತರು ಯುವತಿಯೊಂದಿಗೆ ಎಎಸ್ಪಿ ಎವಿಆರ್‌ಪಿಬಿ ಪ್ರಸಾದ್ ಅವರಿಗೆ ಗ್ಯಾಂಗ್ ವಿರುದ್ಧ ದೂರು ನೀಡಿದ್ದಾರೆ.
ನ್ಯಾಯಾಲಯದಲ್ಲಿ ವಿಚ್ಛೇದನ ಪ್ರಕರಣಗಳು ಬಾಕಿ ಇರುವವರನ್ನು ಗುರಿಯಾಗಿಸಿಕೊಂಡು ಎರಡನೇ ಮದುವೆಯ ಹೆಸರಿನಲ್ಲಿ ವಂಚನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ತಾವು ನಡೆಸುವ ಕೃತ್ಯ ಜನರಿಗೆ ತಿಳಿಯಬಾರದು ಎಂದು ಮಾಸ್ಟರ್ ಪ್ಲ್ಯಾನ್ ಮಾಡುತ್ತಿದ್ದರು. ಹುಡುಗಿಯನ್ನು ನೋಡಲು ಹುಡುಗನ ಸಂಬಂಧಿಕರಿಗೆ ಕರೆ ಮಾಡಿ ಹೆಚ್ಚು ಜನರು ಬರಬಾರದು ಎಂಬ ಷರತ್ತು ವಿಧಿಸುತ್ತಿದ್ದರು. ಮದುವೆಯನ್ನು ಆತುರದಿಂದ ಮಾಡುವುದು ಸೇರಿದಂತೆ ವಿವಿಧ ಕೃತ್ಯಗಳನ್ನು ಎಸಗಿದ್ದಾರೆ.
ಮದುವೆಯಾದ ಕೆಲವೇ ದಿನಗಳಲ್ಲಿ ಕಿರುಕುಳ ಆರಂಭ ಆಗುತ್ತಿತ್ತು. ಈ ಗ್ಯಾಂಗ್‌ನಿಂದ ಸಾಫ್ಟ್‌ವೇರ್ ಎಂಜಿನಿಯರ್‌ಗಳಿಗೂ ವಂಚನೆಯಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಪಾಲಕೊಲ್ಲುವಿನಲ್ಲಿ ಈ ಗ್ಯಾಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಗ್ಯಾಂಗ್‌ನ ಬಲಿಪಶುಗಳು ಇದನ್ನು ತಿಳಿದ ನಂತರ ಒಬ್ಬೊಬ್ಬರಾಗಿ ಹೊರಬರುತ್ತಿದ್ದಾರೆ ಎಂದು ತಿಳಿದುಬಂದಿದೆ.
ಯುವತಿ ಹೇಳಿದ್ದೇನು?
ಈ ಮಧ್ಯೆ, ಈ ಆರೋಪಗಳಿಗೆ ಯುವತಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ತನ್ನ ವಿರುದ್ಧ ಸುಳ್ಳು ಆರೋಪ ಮಾಡಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಈ ವಿವಾಹ ಹಗರಣ ಕೊನಸೀಮಾ ಪ್ರದೇಶದಲ್ಲಿ ದೊಡ್ಡ ಚರ್ಚೆಯ ವಿಷಯವಾಗಿದೆ. ಸಂತ್ರಸ್ತರು ಯುವತಿಯ ಮೇಲೆ ವಂಚನೆ ಆರೋಪ ಮಾಡುತ್ತಿದ್ದರೆ, ಯುವತಿ ತನಗೆ ಏನೂ ತಿಳಿದೇ ಇಲ್ಲ ಎಂದು ಹೇಳುತ್ತಿದ್ದಾಳೆ.