newsics.com
18 ವರ್ಷಗಳ ನಂತರ ಆರ್‌ಸಿಬಿ ಈ ಬಾರಿ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು. ಇದೇ ಖುಷಿಯಲ್ಲಿ ಬೆಂಗಳೂರಿನಲ್ಲಿ ಸಂಭ್ರಮಾಚರಣೆ ಜೋರಾಗಿತ್ತು. ಆರ್‌ಸಿಬಿ ತಂಡ ಟ್ರೋಫಿ ಗೆದ್ದ ಖುಷಿಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವವನ್ನು ಆಯೋಜಿಸಲಾಗಿತ್ತು. ಈ ಸಂಭ್ರಮದಲ್ಲಿ ಲಕ್ಷಾಂತರ ಅಭಿಮಾನಿಗಳು ಭಾಗವಹಿಸಲು ಸ್ಟೇಡಿಯಂನತ್ತ ಬಂದಿದ್ದರು. ಈ ವೇಳೆ ನಡೆದ ಕಾಲ್ತುಳಿತದಿಂದಾಗಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ಸರ್ಕಾರ ಕಾಲ್ತುಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಹೊಸ ಕಾನೂನು ರೂಪಿಸಲು ನಿರ್ಧರಿಸಿದೆ.
ಕರ್ನಾಟಕ ಕ್ರೌಡ್ ಕಂಟ್ರೋಲ್, ಮ್ಯಾನೇಜಿಂಗ್ ಕ್ರೌಡ್, ಮಾಸ್ ಗ್ಯಾದರಿಂಗ್ ವೆನ್ಯುಸ್ ವಿಧೇಯಕ-2025ರ ಪ್ರಕಾರ, ಕಾರ್ಯಕ್ರಮ ನಡೆಸುವ ಮೊದಲು ಪೊಲೀಸ್ ಠಾಣೆಯ ಪೂರ್ವಾನುಮತಿ ಪಡೆಯದ ವ್ಯಕ್ತಿಗಳಿಗೂ ಶಿಕ್ಷೆ ನೀಡಬಹುದಾಗಿದೆ. ಕಾರ್ಯಕ್ರಮಗಳಲ್ಲಿ ಗಲಾಟೆ, ಅಹಿತಕರ ಘಟನೆ, ದೇಹ ಹಾನಿ, ಸಾವು ನೋವಿಗೆ ಕಾರ್ಯಕ್ರಮ ಯೋಜಕರದ್ದೇ ಜವಾಬ್ದಾರಿಯಾಗಿರಲಿದೆ. ಗಾಯಾಳುಗಳಿಗೆ, ಮೃತ ಕುಟುಂಬಗಳಿಗೆ ಪರಿಹಾರ ನೀಡದಿದ್ದರೆ ಆಸ್ತಿ ಹರಾಜು ಹಾಗುವ ಕಠಿಣ ರೂಲ್ಸ್ ಕೂಡ ಇದರಲ್ಲಿದೆ.
ಕಾರ್ಯಕ್ರಮ ಆಯೋಜಕರ ಆಸ್ತಿ ಹರಾಜು ಮೂಲಕ ಪರಿಹಾರ ವಸೂಲಿ, ಶಾಂತಿ ಭಂಗ ತರುವ ಮುನ್ಸೂಚನೆ ಇದ್ದರೆ, ಗಲಾಟೆ, ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರ, ಅನುಮತಿ ಇದ್ದರೂ ಅಹಿತಕರ ಘಟನೆ ನಡೆದರೆ ಕಾರ್ಯಕ್ರಮ ನಿಷೇಧಿಸುವ ಅಧಿಕಾರ ಕೂಡ ಇರಲಿದೆ.