newsics.com
ಮೈಸೂರು: ಕಿಡಿಗೇಡಿಯೊಬ್ಬ ಮೈಸೂರಿನ (Mysuru) ಕೆಆರ್ ವೃತ್ತದಲ್ಲಿರುವ ಆಧುನಿಕ ಮೈಸೂರಿನ ಹರಿಕಾರ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ಮೇಲೆ ಏರಿ ಕುಳಿತು ಅವಮಾನ ಮಾಡಿರುವ ಘಟನೆ ನಡೆದಿದೆ.
ಪ್ರತಿಮೆಗೆ ಹಾನಿ ಆಗೋದನ್ನೂ ಲೆಕ್ಕಿಸದೇ ಪುಂಡಾಟ ಮೆರೆದಿರುವ ವಿಡಿಯೋ ವೈರಲ್ ಆಗಿದೆ.
ಅಂದಾಜು ಅರ್ಧಗಂಟೆಗೂ ಹೆಚ್ಚಿನ ಕಾಲ ಕಿಡಿಗೇಡಿ ಪ್ರತಿಮೆನ್ನು ಏರಿ, ಜಗ್ಗಿರುವುದು ಮಾತ್ರವಲ್ಲದೆ ನಾಲ್ವಡಿಯವರ ಬಾಯಿಗೆ ಬೀಡಿ ಇಟ್ಟು ಅದನ್ನು ಹಚ್ಚುವ ಪ್ರಯತ್ನವನ್ನೂ ಮಾಡಿದ್ದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಗರದ ಹೃದಯಭಾಗದಲ್ಲಿರುವ ಪ್ರತಿಮೆಯ ಬಳಿಯೇ ಇಂಥ ಕೃತ್ಯ ನಡೆದಿದ್ದೂ, ಕರ್ತವ್ಯ ನಿರತ ಪೊಲೀಸರು ಇದನ್ನು ತಡೆಯದೇ ಇರುವುದು ವಿಪರ್ಯಾಸವೇ ಆಗಿದೆ.
ಈ ಘಟನೆಯ ಬೆನ್ನಲ್ಲಿಯೇ ನಗರ ನಿರ್ಮಾಣಕ್ಕೆ ಕಾರಣರಾದ ಮಹನೀಯರ ಪ್ರತಿಮೆಗೆ ರಕ್ಷಣೆ ಇಲ್ಲವೇ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಸಾಮಾನ್ಯವಾಗಿ ಕೆಆರ್ ಸರ್ಕಲ್ ಜನ ಹಾಗೂ ವಾಹನ ದಟ್ಟಣೆಯಿಂದ ಕೂಡಿರುತ್ತದೆ. ಸಂಚಾರ ಪೊಲೀಸರು ದಿನದ 24 ಗಂಟೆ ಕೂಡ ಕಾರ್ಯನಿರ್ವಹಿಸುವ ಸರ್ಕಲ್ ಇದಾಗಿದೆ. ಇಷ್ಟೆಲ್ಲ ಇದ್ದರೂ ಯಾರ ಕಣ್ಣಿಗೂ ಬೀಳದೇ ಆತ ಪ್ರತಿಮೆ ಹತ್ತಿದ್ದು ಹೇಗೆ ಎನ್ನುವ ಪ್ರಶ್ನೆಯನ್ನು ಜನ ಕೇಳುತ್ತಿದ್ದಾರೆ. ಅಮೃತಶಿಲೆಯಿಂದ ಮಾಡಿರುವ ಪ್ರತಿಮೆ ಇದಾಗಿದ್ದು, ಈಗಾಗಲೇ ಕೆಲವು ಕಡೆ ಅದು ಬಿರುಕು ಬಿಟ್ಟಿದೆ.
ಈ ಹಿಂದೆ ಪ್ರತಿಮೆ ಹಾಗೂ ಅದರ ಗೋಪುರಕ್ಕೆ ಆಗಿದ್ದ ಸಣ್ಣಪುಟ್ಟ ಹಾನಿಯನ್ನು ಸರಿ ಮಾಡಲು ಸ್ಥಳೀಯ ಆಡಳಿತ ನಿರೀಕ್ಷೆಯೇ ಮಾಡದಷ್ಟು ದೀರ್ಘ ಸಮಯ ತೆಗೆದುಕೊಂಡಿತ್ತು. ಆದರೆ, ಈಗ ಈ ಘಟನೆಯಿಂದ ಪ್ರತಿಮೆಗೆ ಆಗಿರುವ ಹಾನಿ ಎಂಥದ್ದು ಅನ್ನೋದನ್ನ ಇನ್ನಷ್ಟೇ ಪರಾಮರ್ಶೆ ಮಾಡಬೇಕಿದೆ.