newsics.com
ನವದೆಹಲಿ: ಪಹಲ್ಗಾಮ್ ದಾಳಿಯ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದೆ. ಜಸ್ಟ್ 25 ನಿಮಿಷದಲ್ಲಿ ಪಾಕ್ ಉಗ್ರರ 9 ನೆಲೆಗಳನ್ನ ಭಾರತೀಯ ಸೇನೆ ಧ್ವಂಸ ಮಾಡಿದೆ. ಭಾರತದ ದಾಳಿಗೆ ಪ್ರತಿಯಾಗಿ ಕಳೆದ ರಾತ್ರಿ ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ಮಾಡಲು ಪ್ರಯತ್ನಿಸಿದೆ.
ಭಾರತದ 15 ನಗರಗಳ ಮೇಲೆ ಪಾಕಿಸ್ತಾನ ಮಿಸೈಲ್ ದಾಳಿ ನಡೆಸಿದ್ದು, ಅದನ್ನ S-400 ಏರ್ ಡಿಫೆನ್ಸ್ ಸಿಸ್ಟಮ್ ಸಂಪೂರ್ಣವಾಗಿ ವಿಫಲಗೊಳಿಸಿದೆ. ಭಾರತದ ರಕ್ಷಣಾ ಬತ್ತಳಿಕೆಯಲ್ಲಿರುವ ಪ್ರಮುಖ ಅಸ್ತ್ರ S-400 ಏರ್ ಡಿಫೆನ್ಸ್ ಸಿಸ್ಟಮ್ ಭಾರತವನ್ನ ರಕ್ಷಿಸಿದೆ.
ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಭಾರತವು ರಷ್ಯಾದಿಂದ 40 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸಿದೆ. ಇದು 400 ಕಿಮೀ ದೂರದಿಂದಲೇ ಬರುವ ವೈರಿ ರಾಷ್ಟ್ರಗಳ ಮಿಸೈಲ್ ಅನ್ನು ಪತ್ತೆ ಹಚ್ಚಿ ಹೊಡೆದುರುಳಿಸುತ್ತದೆ. S-400 ಏಕಕಾಲಕ್ಕೆ 72 ವೈರಿ ಮಿಸೈಲ್ ದಾಳಿಯನ್ನು ಪತ್ತೆ ಹಚ್ಚಿ ನಾಶಪಡಿಸುವ ಸಾಮರ್ಥ್ಯ ಹೊಂದಿದೆ.
ಭಾರತವು ರಷ್ಯಾದಿಂದ ಐದು ಸ್ಕ್ವಾಡ್ರನ್‌ಗಳನ್ನು ಖರೀದಿಸಿದ್ದು, ಈ ಐದು S-400 ಸ್ಕ್ವಾಡ್ರನ್‌ಗಳಿಗೆ 35,000 ಕೋಟಿ ರೂ.ಗಳ ಒಪ್ಪಂದಕ್ಕೆ 2018 ರಲ್ಲಿ ಸಹಿ ಹಾಕಲಾಯಿತು. ಈ ಐದರಲ್ಲಿ ಈಗಾಗಲೇ ಮೂರು S-400 ಸ್ಕ್ವಾಡ್ರನ್ಗಳು ಭಾರತ ರಕ್ಷಣಾ ಕ್ಷೇತ್ರಕ್ಕೆ ಸೇರ್ಪಡೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇನ್ನುಳಿದ ಎರಡು 2026ರ ವೇಳೆಗೆ ಬರುವ ನಿರೀಕ್ಷೆಯಿದೆ. 2019ರ ಪುಲ್ವಾಮಾ ದಾಳಿಯ ಬಳಿಕ ಭಾರತ ರಷ್ಯಾದಿಂದ ಈ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಖರೀದಿ ಮಾಡಿದೆ
S-400 ವಾಯು ರಕ್ಷಣಾ ವ್ಯವಸ್ಥೆಯು 600 ಕಿ.ಮೀ ದೂರದವರೆಗೆ ವೈಮಾನಿಕ ಬೆದರಿಕೆಗಳನ್ನು ಪತ್ತೆಹಚ್ಚಬಲ್ಲದು ಮತ್ತು ಫೈಟರ್ ಜೆಟ್‌ಗಳು, ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಪ್ರತಿಬಂಧಿಸಬಲ್ಲದು, ಇದು ಭಾರತದ ಭದ್ರತಾ ಶಸ್ತ್ರಾಗಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ