newsics.com
ಬೆಂಗಳೂರು : ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ‘ಆಪರೇಷನ್ ಸಿಂಧೂರ್’ ಮೂಲಕ ತಿರುಗೇಟು ನೀಡಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ‘ಆಪರೇಷನ್ ಸಿಂಧೂರ್’ ನಡೆಸಿದೆ. ಪಾಕಿಸ್ತಾನದಲ್ಲಿರುವ ಒಟ್ಟು 9 ಭಯೋತ್ಪಾದಕ ಅಡಗುತಾಣಗಳ ಮೇಲೆ ಅಟ್ಯಾಕ್ ಮಾಡಲಾಗಿದ್ದು, 80ಕ್ಕೂ ಹೆಚ್ಚು ಭಯೋತ್ಪಾದಕರು ಜೀವ ಕಳೆದುಕೊಂಡಿರುವ ಬಗ್ಗೆ ವರದಿಯಾಗಿದೆ.
ಈ ನಡುವೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ನಾಯಕರು ‘ಆಪರೇಷನ್ ಸಿಂಧೂರ್’ ಕಾರ್ಯಾಚರಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಆಪರೇಷನ್ ಸಿಂಧೂರ್ ಹಿಂದೆ ನಮ್ಮ ಸಶಸ್ತ್ರ ಪಡೆಗಳ ಅಸಾಧಾರಣ ಧೈರ್ಯಕ್ಕೆ ನಾನು ವಂದಿಸುತ್ತೇನೆ. ಅವರ ವೀರೋಚಿತ ಕ್ರಮವು ಭಾರತವು ಯಾವುದೇ ರೀತಿಯ ಭಯೋತ್ಪಾದನೆಯನ್ನು ಎಂದಿಗೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸುತ್ತದೆ. ಪಹಲ್ಗಾಮ್ನಲ್ಲಿ ನಡೆದ ಕ್ರೂರ ದಾಳಿಯು ಕೇವಲ ಮುಗ್ಧ ಜೀವಗಳ ಮೇಲೆ ಅಲ್ಲ, ಇದು ಭಾರತದ ಕನಸುಗಳು ಮತ್ತು ಚೈತನ್ಯದ ಮೇಲಿನ ದಾಳಿಯಾಗಿದೆ. ನಮ್ಮ ಧೈರ್ಯಶಾಲಿ ಸೈನಿಕರ ಪ್ರತಿಯೊಂದು ಪ್ರಯತ್ನವು ಉಗ್ರರ ಗುಂಡಿಗೆ ಬಲಿಯಾದ ಕುಟುಂಬಗಳು, ಶಾಂತಿ ಮತ್ತು ಮಾನವೀಯತೆಯನ್ನು ನಂಬುವ ಪ್ರತಿಯೊಬ್ಬ ಭಾರತೀಯರಿಗೂ ನ್ಯಾಯವನ್ನು ಒದಗಿಸುವ ಪ್ರತಿಜ್ಞೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆ ಕ್ಷಿಪಣಿ ದಾಳಿ ನಡೆಸಿದ ವಿಚಾರ ತಿಳಿದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ನಮ್ಮ ಸಶಸ್ತ್ರ ಪಡೆಗಳ ಮೇಲೆ ಹೆಮ್ಮೆ ಇದೆ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.
ಹೇಡಿತನದ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಇದೇ ಸೂಕ್ತ ಪ್ರತ್ಯುತ್ತರವಾಗಿದೆ. ನಾವು ಸರ್ಕಾರದೊಂದಿಗೆ ನಿಲ್ಲುತ್ತೇವೆ, ನಮ್ಮ ಭದ್ರತಾ ಪಡೆಗಳೊಂದಿಗೆ ನಿಲ್ಲುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಬರೆದಿದ್ದಾರೆ.