newsics.com
ಮಂಗಳೂರು: ಹಿಂದೂ ಕಾರ್ಯಕರ್ತ ರೌಡಿಶೀಟರ್ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಂಟು ಮಂದಿ ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.
ಕಿನ್ನಿಪದವಿನಲ್ಲಿ ವಾಸವಾಗಿರುವ ಪೇಜಾವರ ಗ್ರಾಮದ ಶಾಂತಿಗುಡ್ಡೆಯ ಅಬ್ದುಲ್ ಸಫ್ವಾನ್ ( 29), ಶಾಂತಿಗುಡ್ಡೆಯ ನಿಯಾಜ್ (28), ಕೆಂಜಾರು ಗ್ರಾಮದ ಮೊಹಮ್ಮದ್ ಮುಝಮಿಲ್ (32), ಕಳವಾರು ಕುರ್ಸುಗುಡ್ಡೆಯ ಕಲಂದರ್ ಶಾಫಿ (31), ಚಿಕ್ಕಮಂಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ರುದ್ರಪಾದೆಯ ರಂಜಿತ್ (19), ಕಳಸ ಕೋಟೆ ಹೊಳೆ ಮಾವಿನಕೆರೆ ಗ್ರಾಮದ ನಾಗರಾಜ್ (20), ಜೋಕಟ್ಟೆಯ ಮೊಹಮ್ಮದ್ ರಿಜ್ವಾನ್ (28) ಹಾಗೂ ಕಾಟಿಪಳ್ಳ ಮಂಗಳಪೇಟೆಯ ಅದಿಲ್ ಮೆಹರೂಫ್ ಬಂಧಿತ ಆರೋಪಿಗಳು. ಬಂಧಿತ ಅರೋಪಿಗಳ ಪೈಕಿ ಆರು ಜನರು ದಕ್ಷಿಣ ಕನ್ನಡ ಜಿಲ್ಲೆಯವರಾಗಿದ್ದರೆ, ಉಳಿದ ಇಬ್ಬರು ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರು ಮೂಲದವರಾಗಿದ್ದಾರೆ.
ಶಂಕಿತ ನಾಗರಾಜ್ , ರಂಜಿತ್ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದವರಾಗಿದ್ದು, ಇವರಿಗೆ ಕಳಸ ಪಟ್ಟಣದಲ್ಲಿ ಮೀನಿನ ವ್ಯಾಪಾರ ಮಾಡುತ್ತಿದ್ದ ನಿಯಾಜ್ ಸ್ನೇಹಿತನಾಗಿದ್ದ.
ರಂಜಿತ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಸುಹಾಸ್ ಮೇಲೆ ದಾಳಿ ಮಾಡಲು ಈತನೇ ಲಾಂಗ್ ತಂದುಕೊಟ್ಟಿದ್ದಾನೆ ಎಂಬ ಮಾಹಿತಿ ಸಿಕ್ಕಿದೆ.
ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್, ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಮಾವಿನಕೆರೆ ನಿವಾಸಿ.
ನಿಯಾಜ್ ಇಬ್ಬರು ಸ್ನೇಹಿತರಾದ ರಂಜಿತ್ ಹಾಗೂ ನಾಗರಾಜ್ ಚಿಕ್ಕಮಗಳೂರಿನ ಕಳಸದಲ್ಲಿ ವಾಸವಿದ್ದಾರೆ. ರಂಜಿತ್ ಹಾಗೂ ನಾಗರಾಜ್ 15 ದಿನಗಳ ಹಿಂದೆ ಅಬ್ದುಲ್ ಸಫ್ವಾನ್ ಮನೆಯಲ್ಲಿ ವಾಸ ಮಾಡಿದ್ದಾರೆ. ಸಫ್ವಾನ್ ಮನೆಗೆ ಬಂದಿದ್ದ ಇವರು, ಸುಹಾಸ್ ಶೆಟ್ಟಿಯನ್ನು ಫಾಲೋ ಮಾಡಿದ್ದಾರೆ. ಈ ಇಬ್ಬರಿಗೆ ಕೆಲವರು ಸುಹಾಸ್ ಶೆಟ್ಟಿ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ. ಇಲ್ಲಿ ಸಿಕ್ಕ ಖಚಿತ ಆಧಾರದ ಮೇಲೆ ಅಂದು ರಾತ್ರಿ ಸುಹಾಸ್ ಶೆಟ್ಟಿ ಮೇಲೆ ದಾಳಿ ಆಗಿದೆ ಎಂದು ಕಮಿಷನರ್ ತಿಳಿಸಿದ್ದಾರೆ.