newsics.com
ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದಲ್ಲಿ ವಿಭಾಗವೊಂದರ ಮುಖ್ಯಸ್ಥರಾಗಿದ್ದ ಭಾರತೀಯ ಮೂಲದ ನೀಲಾ ರಾಜೇಂದ್ರ ಅವರನ್ನು ವಜಾ ಮಾಡಲಾಗಿದೆ.
ನಾಸಾದ ಡಿಇಐ ಕಾರ್ಯಕ್ರಮವನ್ನೇ ರದ್ದುಪಡಿಸಿರುವ ಡೊನಾಲ್ಡ್ ಟ್ರಂಪ್, “ಇದು ಆಡಳಿತಕ್ಕೆ ಅನಗತ್ಯ ಹೊರೆ” ಎಂದು ಹೇಳಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. ನೀಲಾ ರಾಜೇಂದ್ರ ಅವರನ್ನು ಉಳಿಸಿಕೊಳ್ಳಲು ನಾಸಾ ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾಗಿದ್ದು, ಅಧ್ಯಕ್ಷ ಆದೇಶವನ್ನು ಪಾಲಿಸಲಾಗಿದೆ
ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯು ತನ್ನ ಉನ್ನತ ವೈವಿಧ್ಯತೆ, ಸಮಾನತೆ ಮತ್ತು ಸೇರ್ಪಡೆ (DEI) ಅಧಿಕಾರಿ ನೀಲಾ ಅವರನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶ ಹಿನ್ನೆಲೆ ವಜಾಗೊಳಿಸಲಾಗಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.
ಕಳೆದ ವಾರ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯ ಉದ್ಯೋಗಿಗಳಿಗೆ ಇಮೇಲ್ ಮೂಲಕ, ನೀಲಾ ರಾಜೇಂದ್ರ ಅವರನ್ನು ಕೆಲಸದಿಂದ ವಜಾಗೊಳಿಸಿದ ವಿಷಯವನ್ನು ತಿಳಿಸಲಾಗಿದೆ. “ನೀಲಾ ರಾಜೇಂದ್ರ ಇನ್ನು ಮುಂದೆ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡುವುದಿಲ್ಲ” ಎಂದು ನಾಸಾ ಮಾಹಿತಿ ನೀಡಿದೆ.
ಹಲವು ವರ್ಷಗಳಿಂದ ನೀಲಾ ರಾಜೇಂದ್ರ ನಾಸಾದಲ್ಲಿ ಹಿರಿಯ ಹುದ್ದೆಯನ್ನು ಅಲಂಕರಿಸಿದ್ದರು. ಅವರು ಅಲ್ಲಿದ್ದಾಗ ಹಲವು ಉನ್ನತ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು. ನಾಸಾದಲ್ಲಿ ವೈವಿಧ್ಯತೆಯನ್ನು ತರಲು ‘ಸ್ಪೇಸ್ ವರ್ಕ್‌ಫೋರ್ಸ್ 2030’ ಎಂಬ ಭವಿಷ್ಯದ ಭರವಸೆಯ ಯೋಜನೆ ಜಾರಿಗೆ ತಂದಿದ್ದರು. ಈ ಯೋಜನೆಯು ಮಹಿಳೆಯರು ಮತ್ತು ಅಲ್ಪಸಂಖ್ಯಾತರನ್ನು ನೇಮಿಸಿಕೊಳ್ಳುವುದು ಅವರ ಪ್ರಮುಖ ಗುರಿಯಾಗಿತ್ತು.
ತನ್ನ ವೈವಿಧ್ಯತೆ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿರುವ ಇತರ ಫೆಡರಲ್ ಸರ್ಕಾರಿ ಸಂಸ್ಥೆಗಳ ಸಾಲಿಗೆ ಈಗ ನಾಸಾ ಸೇರಿದೆ.
ಡೊನಾಲ್ಡ್ ಟ್ರಂಪ್ ಅವರ ಆದೇಶದ ಪ್ರಕಾರ, “ಇಂತಹ ಕಾರ್ಯಕ್ರಮಗಳು ಅಮೆರಿಕನ್ನರನ್ನು ಜನಾಂಗ, ಬಣ್ಣ ಮತ್ತು ಲಿಂಗದ ಆಧಾರದ ಮೇಲೆ ವಿಂಗಡಿಸಿವೆ. ತೆರಿಗೆದಾರರ ಹಣವನ್ನು ವ್ಯರ್ಥ ಮಾಡಿವೆ ಮತ್ತು ಮಾನಹಾನಿಕರ ತಾರತಮ್ಯಕ್ಕೆ ಕಾರಣವಾಗಿವೆ”. ಟ್ರಂಪ್ ಆದೇಶದ ಹಿನ್ನೆಲೆಯಲ್ಲಿ ನಾಸಾ ಸೇರಿದಂತೆ ಅನೇಕ ಸರ್ಕಾರಿ ಸಂಸ್ಥೆಗಳು ತಮ್ಮ ಡಿಇಐ ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.
https://www.newsics.com/2025/04/15/akai-who-learned-kannada-searched-google-for-his-future-wife/