newsics.com
ದೇಶದ ಪ್ರಮುಖ ನಿರ್ದೇಶಕರಲ್ಲಿ ಹಾಗೂ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿರುವ ರಾಜಮೌಳಿ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ರಾಜಮೌಳಿ ಅವರು ಅವರ ಆತ್ಮೀಯ ಗೆಳಯರೊಬ್ಬರಿಗೆ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಇದೀಗ ಕೇಳಿ ಬಂದಿದೆ.
ಅವರ ಸ್ನೇಹಿತ ಶ್ರೀನಿವಾಸ ರಾವ್ ಎನ್ನುವವರು ಗಂಭೀರ ಆರೋಪವೊಂದನ್ನು ಮಾಡಿದ್ದಾರೆ. ರಾಜಮೌಳಿ ಅವರ ಬಗ್ಗೆ ಸೆಲ್ಫಿ ವಿಡಿಯೋ ಮಾಡಿರುವ ಅವರು, ಚಿತ್ರಹಿಂಸೆ ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ಸಹ ಅವರು ಪತ್ರ ಬರೆದಿದ್ದಾರೆ. ರಾಜಮೌಳಿ ಅವರು ನೀಡುತ್ತಿರುವ ಕಿರುಕುಳದಿಂದ ತಪ್ಪಿಸಿಕೊಳ್ಳಲು ಈಗ ಇರುವ ಏಕೈಕ ಆಯ್ಕೆಯೆಂದರೆ ಆತ್ಮಹತ್ಯೆ ಮಾಡಿಕೊಳ್ಳುವುದು. ಇದೀಗ ಈ ವಿಷಯ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಇನ್ನು ಈ ವಿಡಿಯೋದಲ್ಲಿ ಶ್ರೀನಿವಾಸ್ ಅವರು ರಾಜಮೌಳಿಗಾಗಿ ನಾನು ಇಡೀ ಜೀವಮಾನವನ್ನೇ ಮುಡಿಪಾಗಿರಿಸಿದ್ದೇನೆ ಎಂದು ಅವರು ಹೇಳಿದ್ದಾರೆ. ಸೆಲ್ಫಿ ವಿಡಿಯೋ ಹಾಗೂ ಪತ್ರವನ್ನು ಅವರು ಬರೆದಿದ್ದರು. ನಾನು ಹಾಗೂ ರಾಜಮೌಳಿ ಅವರು ಬರೋಬ್ಬರಿ 34 ವರ್ಷಗಳಿಂದ ಸ್ನೇಹಿತರು. ಅವರಿಗಾಗಿ ನಾನು ಮದುವೆಯನ್ನೂ ಆಗದೆ ನನ್ನ ಜೀವನವನ್ನೇ ತ್ಯಾಗ ಮಾಡಿದ್ದೇನೆ.ಈಗ ಅವರು ನನಗೆ ಚಿತ್ರಹಿಂಸೆ ಕೊಡುತ್ತಿದ್ದಾರೆ. ಹೀಗಾಗಿ ಸಾಯುವುದಕ್ಕೆ ಯೋಚಿಸುತ್ತಿದ್ದೇನೆ ಎಂದು ಅವರು ಹೇಳಿದ್ದಾರೆ. ಅಲ್ಲದೆ ಈ ಪತ್ರದಲ್ಲಿ ಯಮದೊಂಗ ಚಿತ್ರದ ಸಹಾಯಕ ನಿರ್ದೇಶಕರ ಬಗ್ಗೆಯೂ ಅವರು ಮಾತನಾಡಿದ್ದಾರೆ.
ಇನ್ನು ನಿರ್ದೇಶಕ ರಾಜಮೌಳಿ ಅವರ ಬಗ್ಗೆ ಆರೋಪ ಮಾಡಿರುವ ಶ್ರೀನಿವಾಸ್ ಅವರು ಏಕಾಏಕಿ ನಾಪತ್ತೆಯಾಗಿದ್ದು. ಇದು ಇನ್ನಷ್ಟು ಅನುಮಾನ ಹಾಗೂ ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ಯಾಕೆಂದರೆ ರಾಜಮೌಳಿ ಅವರ ಬಗ್ಗೆ ಪತ್ರ ಹಾಗೂ ವಿಡಿಯೋ ಮಾಡಿದ ಕೂಡಲೇ ಅವರ ಬಗ್ಗೆ ಯಾವುದೇ ಸುಳಿವು ಸಹ ಪತ್ತೆಯಾಗದೆ ಇರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.