newsics.com
ಬೆಂಗಳೂರು: ಮಂಡಿನೋವಿನಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಕಾರು ಖರೀದಿಗೆ ಮುಂದಾಗಿದ್ದಾರೆ.
ಪ್ರಸ್ತುತವಾಗಿ ಬಳಸುತ್ತಿರುವ ಸರ್ಕಾರಿ ಕಾರಿನಲ್ಲಿ ಹತ್ತಲು ಮತ್ತು ಇಳಿಯಲು ಸಾಧ್ಯವಾಗದಿರುವ ಹಿನ್ನೆಲೆಯಲ್ಲಿ, ಹೊಸ ಟೊಯೋಟಾ ವೆಲ್ಫೈರ್ ಕಾರು ಖರೀದಿ ಮಾಡಲು ಮುಂದಾಗಿದ್ದಾರೆ. ಅಲ್ಲದೇ ಪ್ರಾಯೋಗಿಕ ಕಾರಿನಲ್ಲಿ ಟೆಸ್ಟ್ ಡ್ರೈವ್ ತೆಗೆದುಕೊಂಡಿರುವ ಸಿದ್ದರಾಮಯ್ಯ, ಅದರಲ್ಲೇ ವಿಧಾನಸೌಧಕ್ಕೆ ಆಗಮಿಸಿ ಗಮನ ಸೆಳೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಗುಣಮುಖರಾಗಲು ಕೆಲ ದಿನಗಳ ಅವಶ್ಯಕತೆ ಇದೆ. ಇದರ ನಡುವೆ ಆಡಳಿತ, ಕಚೇರಿ,ಕಾರ್ಯಕ್ರಮ ಸೇರಿದಂತೆ ಎಲ್ಲವನ್ನು ಸಿದ್ದರಾಮಯ್ಯ ನಿಭಾಯಿಸಬೇಕಿದೆ. ಪ್ರತಿ ದಿನ ಕಚೇರಿಗೆ ತೆರಳಲು ಕಾರಿನಲ್ಲಿ ಪ್ರಯಾಣ, ಹತ್ತಿ ಇಳಿಯುವುದು ಸಿದ್ದರಾಮಯ್ಯಗೆ ಸವಾಲಾಗುತ್ತಿದೆ. ಇದರಿಂದ ಸಿದ್ದರಾಮಯ್ಯ ಮಂಡಿ ನೋವು ಹೆಚ್ಚಾಗುತ್ತಿದೆ. ಹೀಗಾಗಿ ಸುಲಭವಾಗಿ ಹತ್ತಿ ಇಳಿಯಲು ಹಾಗೂ ಆರಾಮದಾಯಕ ಪ್ರಯಾಣಕ್ಕೆ ಸಿದ್ದರಾಮಯ್ಯ ಟೊಯೋಟಾ ವೆಲ್ಫೈರ್ ಕಾರು ಖರೀದಿಸಲು ಮುಂದಾಗಿದ್ದಾರೆ.
ಈ ಕಾರಿನ ಆನ್ ರೋಡ್ ಬೆಲೆ 1.2 ಕೋಟಿಯಿಂದ 1.3 ಕೋಟಿ ರೂಪಾಯಿ. 2487 cc ಎಂಜಿನ್ ಹೊಂದಿರುವ ಈ ಕಾರು 240Nm ಟಾರ್ಕ್ ಹಾಗೂ 190.42bhp ಮ್ಯಾಕ್ಸ್ ಪವರ್ ನೀಡಲಿದೆ. 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಕಾರು ಒಂದು ಲೀಟರ್‌ಗೆ 16 ಕಿ.ಮೀ ಮೈಲೇಜ್ ನೀಡಲಿದೆ. 148 ಲೀಟರ್ ಬೂಟ್ ಸ್ಪೇಸ್ ಹೊಂದಿದೆ.
ಟೊಯೋಟಾ ವೆಲ್ಫೈರ್ ಕಾರು ಹೆಚ್ಚಿನ ಸ್ಥಳವಕಾಶ ಒದಗಿಸುತ್ತದೆ. ಇನ್ನು ಈ ಕಾರಿನಲ್ಲಿ ಹತ್ತಿ ಇಳಿಯುವುದು ಸುಲಭ ಹಾಗೂ ಪ್ರಯಾಣ ಕೂಡ ಅಷ್ಟೇ ಆನಂದದಾಯಕ. ಸಿದ್ದರಾಮಯ್ಯಗೆ ಮಂಡಿ ನೋವು ಸಮಸ್ಯೆ ಇರುವ ಕಾರಣ ಟೊಯೋಟಾ ವೆಲ್ಫೈರ್ ಕಾರು ಕೊಂಚ ರಿಲೀಫ್ ನೀಡಲಿದೆ.
ಟೊಯೋಟಾ ವೆಲ್ಫೈರ್ ಕಾರು ರಾಜಕಾರಣಿಗಳು, ಸೆಲೆಬ್ರೆಟಿಗಳು, ಉದ್ಯಮಿಗಳು ಬಳಸುತ್ತಾರೆ. ಕ್ಯಾರವಾನ್ ರೀತಿ ಈ ಕಾರನ್ನು ಬಳಸಲಾಗುತ್ತದೆ. ಒಳಗೆ ಲಾಂಜ್ ರೀತಿಯ ಸ್ಥಳವಕಾಶವಿದೆ. ವಿಶೇಷ ಅಂದರೆ ಮೊದಲ ಸಾಲು ಮಾತ್ರವಲ್ಲ, ಎರಡನೇ ಸಾಲು ಸೀಟುಗಳಲ್ಲಿ ಕುಳಿತುಕೊಂಡರೂ ಅಷ್ಟೇ ಆರಾಮದಾಯಕವಾಗಿರಲಿದೆ.