newsics.com
ಹಾಸನ : ಹಾಸನಾಂಬೆ ದೇವಿಯ ದರ್ಶನಕ್ಕೆ ನೀಡಲಾಗುತ್ತಿದ್ದ ಪಾಸ್ ನ್ನು ನಿನ್ನೆ ರದ್ದು ಮಾಡಲಾಗಿತ್ತು, ಆದಾಯದ ಆಸೆಗೆ ಜೋತುಬಿದ್ದ ಆಡಳಿತ ಮಂಡಳಿ, ರದ್ದಾಗಿದ್ದ ಹಾಸನಾಂಬೆ ದರ್ಶನದ ಟಿಕೆಟ್ ಕೌಂಟರ್’ನ್ನು ಮತ್ತೆ ರೀ ಓಪನ್ ಮಾಡಿದೆ.
ಆನ್ಲೈನ್ ಜತೆಗೆ ಆಫ್ಲೈನ್ನಲ್ಲಿ ಈಗ 300, 400 ರೂ ಬೆಲೆಯ ವಿಶೇಷ ಪಾಸ್ ಮಾರಾಟ ಮಾಡಲಾಗುತ್ತಿದ್ದು, ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಗುರುವಾರ ತಡರಾತ್ರಿಯಿಂದ ಹಾಸನಾಂಬೆ ದೇವಾಲಯದ ಪಾಸ್’ ಕೌಂಟರ್ ಮತ್ತೆ ಓಪನ್ ಮಾಡಲಾಗಿದೆ. ಈ ವರ್ಷ ಭಾರೀ ಸಂಖ್ಯೆಯಲ್ಲಿ ಭಕ್ತರು ಹಾಸನಾಂಬೆ ದರ್ಶನಕ್ಕೆ ಆಗಮಿಸಿದ್ದರಿಂದ ಸುಗಮ ದರ್ಶನಕ್ಕೆ ವ್ಯವಸ್ಥೆ ಮಾಡಲು ಜಿಲ್ಲಾಡಳಿತ ಹರಸಾಹಸ ನಡೆಸಿದೆ.
ಧರ್ಮದರ್ಶನದ ಸಾಲು 3 ಕಿ.ಮೀ.ವರೆಗೂ ಇದ್ದು, ಇನ್ನು ವಿಐಪಿ, ವಿವಿಐಪಿ, ಒಂದು ಸಾವಿರ ರೂಪಾಯಿಯ ವಿಶೇಷ ಪಾಸ್ ಮತ್ತಿತರ ಪಾಸುಗಳನ್ನು ಹೊಂದಿದವರ ಸಾಲಿನಲ್ಲಿಯೂ ಉದ್ದನೆಯ ಕ್ಯೂ ಇತ್ತು. ಈ ಬಾರಿ 20 ಲಕ್ಷ ಮಂದಿ ಹಾಸನಾಂಬ ದೇವಿಯ ದರ್ಶನ ಪಡೆಯಬಹುದೆಂದು ಜಿಲ್ಲಾಡಳಿತ ಅಂದಾಜಿಸಿದ್ದರೂ ಅದಕ್ಕಿಂತಲೂ ಹೆಚ್ಚು ಜನ ನಿರೀಕ್ಷೆಗೂ ಮೀರಿ ಭಕ್ತರು ಆಗಮಿಸಿದ್ದರಿಂದ ಗೊಂದಲ ಉಂಟಾಯಿತು.
ಹಾಸನಾಂಬಾ ದರ್ಶನಕ್ಕಾಗಿ ಪ್ರತಿ ಬಾರಿ ವಿಐಪಿ, ವಿವಿಐಪಿ ಪಾಸ್ಗಳನ್ನು ನೀಡಲಾಗುತ್ತದೆ. ಇದಕ್ಕಾಗಿ ಹಣ ಪಾವತಿ ಮಾಡಬೇಕು, ನಂತರ ನೇರ ದರ್ಶನವನ್ನು ಮಾಡಬಹುದು. ಆದರೆ ಈ ಬಾರಿ ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ.