newsics.com
ನವದೆಹಲಿ: ಭಾರತ್ ಮಂಟಪದಲ್ಲಿರುವ ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯ ಅನುಭೂತಿ ಕೇಂದ್ರಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ದಿಢೀರ್ ಭೇಟಿ ನೀಡಿದ್ದಾರೆ. ಪ್ರಧಾನಮಂತ್ರಿ ಗತಿಶಕ್ತಿಯ ಮೂರನೇ ವಾರ್ಷಿಕೋತ್ಸವ ಹಿನ್ನೆಲೆ ಮೋದಿ ಭೇಟಿ ನೀಡಿದ್ದು, ಯೋಜನೆಯ ಪ್ರಗತಿ ಕಾರ್ಯಗಳನ್ನು ಶ್ಲಾಘಿಸಿದ್ದಾರೆ.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆಯನ್ನು ವಿವಿಧ ಆರ್ಥಿಕ ವಲಯಗಳಿಗೆ ಬಹು-ಮಾದರಿ ಸಂಪರ್ಕ ಮೂಲಸೌಕರ್ಯವನ್ನು ಒದಗಿಸುವ ನಿಟ್ಟಿನಲ್ಲಿ 2021 ರ ಅಕ್ಟೋಬರ್ 13 ರಂದು ಪ್ರಾರಂಭಿಸಲಾಯಿತು. ಈ ಯೋಜನೆ ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿಗೆ ಪೂರಕವಾಗಿದ್ದು, ಇದು ರೈಲ್ವೆ, ರಸ್ತೆಗಳು, ಬಂದರುಗಳು, ಜಲಮಾರ್ಗಗಳು, ವಿಮಾನ ನಿಲ್ದಾಣಗಳು, ಸಾಮೂಹಿಕ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ ನಿಜವಾಗಿಯೂ ಕೇಂದ್ರ ಸರ್ಕಾರದ 44 ಸಚಿವಾಲಯಗಳು ಮತ್ತು 36 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೇರಿದ 1529 ದತ್ತಾಂಶಗಳೊಂದಿಗೆ ಸಂಪೂರ್ಣ ಸರ್ಕಾರದ ವಿಧಾನವನ್ನು ಸಂಕೇತಿಸುತ್ತದೆ.