newsics.com
ಕೊಪ್ಪಳ: ಅಂಗನವಾಡಿಯಲ್ಲಿ ಮಕ್ಕಳ ಊಟದ ತಟ್ಟೆಯಲ್ಲಿ ಮೊಟ್ಟೆಯಿಟ್ಟು ಅದನ್ನು ಬಾಯಿಗಿಡುವ ಮುನ್ನವೇ ಕಸಿದುಕೊಳ್ಳುತ್ತಿದ್ದ ವಂಚನೆ ಪ್ರಕರಣವೊಂದು ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ಗುಂಡೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ಅಂಗನವಾಡಿ ಕಾರ್ಯಕರ್ತೆ ಲಕ್ಷ್ಮೀ, ಸಹಾಯಕಿ ಶೈನಜಾ ಬೇಗಂ ಅವರನ್ನು ಅಮಾನತು ಮಾಡಲಾಗಿದೆ. ಕಾರಟಗಿ ತಾಲೂಕಿನ ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಹಾಯಕಿ ಮಕ್ಕಳಿಗೆ ವಿತರಿಸುವ ಮೊಟ್ಟೆಯನ್ನು ಮಕ್ಕಳ ತಟ್ಟೆಯಲ್ಲಿ ಇಟ್ಟು ಪೋಟೋ ತೆಗೆದ ಬಳಿಕ ಆ ಮೊಟ್ಟೆಗಳನ್ನು ಮರಳಿ ಪಡೆದು ಹೊರಗಡೆ ಮಾರಾಟ ಮಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೃತ್ಯದ ವಿಡಿಯೋ ವೈರಲ್ ಆಗುತ್ತಿದ್ದಂತೆ ಸ್ಥಳೀಯರು ಕೂಡ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಂಗನವಾಡಿ ಕಾರ್ಯಕರ್ತೆಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಲೆತಗ್ಗಿಸುವಂತ ಕೆಲಸ ಮಾಡಿದ್ದಾರೆ. ಇದರಿಂದ ಎಚ್ಚೆತ್ತ ಇಲಾಖೆಯು ಗುಂಡೂರು ಗ್ರಾಮದ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಸಿಬ್ಬಂದಿಯನ್ನು ಅಮಾನತು ಮಾಡಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕಾರಿ ಆದೇಶ ಹೊರಡಿಸಿದ್ದಾರೆ.