newsics.com/ನ್ಯೂಸಿಕ್ಸ್
ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು ದೇಶದೊಳಗೆ ಸಾಕಷ್ಟು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ ಸಕ್ಕರೆ ರಫ್ತಿನ ಮೇಲೆ ತಕ್ಷಣದಿಂದ ಜಾರಿಗೆ ಬರುವಂತೆ ಸೆಪ್ಟೆಂಬರ್ 30ರವರೆಗೆ ಸಂಪೂರ್ಣ ನಿಷೇಧ ಹೇರಿದೆ.
https://youtube.com/shorts/vd_Fn8drod4?si=CvPPZAJu5QmGONhu
ಮೇ 13 ರಂದು ವಿದೇಶಿ ವ್ಯಾಪಾರ ನಿರ್ದೇಶನಾಲಯ ಹೊರಡಿಸಿದ ಅಧಿಸೂಚನೆಯಲ್ಲಿ, ಸುಂಕ ದರ ಕೋಟಾ ಯೋಜನೆಯಡಿ ಯುರೋಪಿಯನ್ ಒಕ್ಕೂಟ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುವ ಸಕ್ಕರೆಗೆ ಈ ಆದೇಶ ಅನ್ವಯಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಈ ಕ್ರಮವು ಜಾಗತಿಕ ಬಿಳಿ ಮತ್ತು ಕಚ್ಚಾ ಸಕ್ಕರೆ ಬೆಲೆಗಳನ್ನು ಬೆಂಬಲಿಸುವ ಸಾಧ್ಯತೆಯಿದೆ, ಆದರೆ ಪ್ರತಿಸ್ಪರ್ಧಿ ಉತ್ಪಾದಕರಾದ ಬ್ರೆಜಿಲ್ ಮತ್ತು ಥೈಲ್ಯಾಂಡ್ ಏಷ್ಯನ್ ಮತ್ತು ಆಫ್ರಿಕನ್ ಖರೀದಿದಾರರಿಗೆ ಸಾಗಣೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ.
ಹವಾಮಾನ ವೈಪರೀತ್ಯ ಹಾಗೂ ಎಲ್ ನಿನೋ ಪ್ರಭಾವದಿಂದಾಗಿ ಕಬ್ಬಿನ ಉತ್ಪಾದನೆ ಕುಂಠಿತಗೊಳ್ಳುವ ಆತಂಕ ಎದುರಾಗಿದೆ. ಭಾರತೀಯ ಸಕ್ಕರೆ ಮತ್ತು ಜೈವಿಕ ಇಂಧನ ತಯಾರಕರ ಸಂಘವು ಪ್ರಸಕ್ತ ಹಂಗಾಮಿನ ಒಟ್ಟು ಸಕ್ಕರೆ ಉತ್ಪಾದನಾ ಅಂದಾಜನ್ನು 32 ಮಿಲಿಯನ್ ಟನ್‌ಗಳಿಗೆ ಇಳಿಸಿದೆ. ಉತ್ಪಾದನೆ ಕುಂಠಿತಗೊಂಡಿರುವ ಕಾರಣ ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಚಿಲ್ಲರೆ ದರಗಳು ಹೆಚ್ಚಾಗದಂತೆ ತಡೆಯಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಇದರ ಜೊತೆ ಹಬ್ಬದ ಸೀಸನ್‌ಗಳಲ್ಲಿ ದೇಶದೊಳಗೆ ಸಕ್ಕರೆ ಕೊರತೆಯಾಗದಂತೆ ಬಫರ್ ಸ್ಟಾಕ್ ಕಾಯ್ದುಕೊಳ್ಳಲು ಮತ್ತು ಪಶ್ಚಿಮ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಿಕ್ಕಟ್ಟಿನಿಂದಾಗಿ ಎದುರಾಗಬಹುದಾದ ಆಹಾರ ಹಣದುಬ್ಬರದ ಅಪಾಯದಿಂದ ದೇಶದ ಜನರನ್ನು ರಕ್ಷಿಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
https://www.newsics.com/2026/05/15/indian-ship-attacked-off-oman-coast-14-crew-members-rescued/