newsics.com/ನ್ಯೂಸಿಕ್ಸ್
ಹಾಲಿ ಚಾಂಪಿಯನ್ ಆರ್ಸಿಬಿಯನ್ನ ಬಿರ್ಲಾ ಗ್ರೂಪ್ (Birla Group) ನೇತೃತ್ವದ ಒಕ್ಕೂಟ ಖರೀದಿಸಿದೆ. ಬರೋಬ್ಬರಿ 16,700 ಕೋಟಿ ರೂಪಾಯಿಗೆ ಆರ್ಸಿಬಿಯನ್ನ ಈ ಒಕ್ಕೂಟ ತನ್ನದಾಗಿಸಿಕೊಂಡ ಬೆನ್ನಲ್ಲೇ ರಾಜಸ್ಥಾನ ರಾಯಲ್ಸ್ ಕೂಡ ದೊಡ್ಡಮೊತ್ತಕ್ಕೆ ಮಾರಾಟವಾಗಿದೆ.
ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ಕೂಡ ಮಾರಾಟವಾಗಿದೆ. ಈ ಮೊದಲು ಫ್ರಾಂಚೈಸಿಯನ್ನ ಅಮೆರಿಕಾ ಮೂಲದ ಉದ್ಯಮಿ ಕಲ್ ಸೊಮಾನಿ 1.63 ಬಿಲಿಯನ್ ಡಾಲರ್ ಅಥವಾ 15,300 ಕೋಟಿ ರೂಪಾಯಿಗೆ ಖರೀದಿಸಿದೆ ಎಂದು ವರದಿಗಳಿದ್ದವು. ಆದರೆ ಈ ಊಹಾಪೋಹಕ್ಕೆ ಇಂದು ಪೂರ್ಣವಿರಾಮ ಬಿದ್ದಿದೆ.
ಹೊಸ ಡೀಲ್ ಪ್ರಕಾರ ರಾಜಸ್ಥಾನ್ ರಾಯಲ್ಸ್ ತಂಡವನ್ನ ಭಾರತೀಯ ಸ್ಟೀಲ್ ಉದ್ಯಮದ ದಿಗ್ಗಜ ಲಕ್ಷ್ಮಿ ಮಿತ್ತಲ್ ಕುಟುಂಬ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ನ ಸಿಇಒ ಅದಾರ್ ಪೂನಾವಾಲಾ ಸೇರಿ 1.65 ಬಿಲಿಯನ್ ಡಾಲರ್ ಅಥವಾ 15,660 ಕೋಟಿ ರೂಪಾಯಿಗೆ ಖರೀದಿಸಿದ್ದಾರೆ ಮಿತ್ತಲ್ ಕುಟುಂಬ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಶೇ.75 ರಷ್ಟು ಪಾಲನ್ನ ತನ್ನದಾಗಿಸಿಕೊಂಡಿದೆ.
ರಾಜಸ್ಥಾನ್ ರಾಯಲ್ಸ್ ತಂಡದ ಹಿಂದಿನ ಮಾಲೀಕರಾದ ಮನೋಜ್ ಬದಾಲೆ ಮತ್ತು ಅವರ ಸಹಭಾಗಿಗಳಿಂದ ಮಿತ್ತಲ್ ಹಾಗೂ ಪೂನಾವಾಲಾ ತಂಡವನ್ನು ಖರೀದಿಸಿದ್ದಾರೆ. ಈ ಒಪ್ಪಂದವು ಐಪಿಎಲ್ ತಂಡ, ದಕ್ಷಿಣ ಆಫ್ರಿಕಾದ ಪಾರ್ಲ್ ರಾಯಲ್ಸ್ ಮತ್ತು ಕೆರೀಬಿಯನ್ನ ಬಾರ್ಬಡೋಸ್ ರಾಯಲ್ಸ್ ಸೇರಿದಂತೆ ರಾಯಲ್ಸ್ ಫ್ರಾಂಚೈಸಿಯ ಎಲ್ಲಾ ಲೀಗ್ಗಳಲ್ಲಿರುವ ತಂಡಗಳ ಮಾಲೀಕತ್ವವೂ ಸೇರಿದೆ
ಡೀಲ್ ಪ್ರಕಾರ, ಮಿತ್ತಲ್ ಕುಟುಂಬ ಸಿಂಹಪಾಲನ್ನು ಹೊಂದಿದ್ದು, ಫ್ರಾಂಚೈಸಿಯ ಸಂಪೂರ್ಣ ನಿಯಂತ್ರಣ ಪಡೆಯಲಿದೆ. ಮಿತ್ತಲ್ ಕುಟುಂಬ ಶೇ.75 ಪಾಲನ್ನು ಹೊಂದಿದೆ. ಆದಾರ್ ಪೂನಾವಾಲಾ ಶೇ.18 ಷೇರನ್ನ ಪಡೆದಿದ್ದರೆ, ಹಿಂದಿನ ಮಾಲೀಕರಾದ ಬದಾಲೆ ಶೇ.7 ರಷ್ಟು ಶೇರನ್ನ ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.
ಈ ಒಪ್ಪಂದವು 2016ರ ಮೂರನೇ ತ್ರೈಮಾಸಿಕದಲ್ಲಿ ಪೂರ್ಣಗೊಳ್ಳಲಿದೆ. ಬಿಸಿಸಿಐ, ಸಿಐಸಿ ಮತ್ತು ಐಪಿಎಲ್ ಗವರ್ನಿಂಗ್ ಕೌನ್ಸಿಲ್ ಅನುಮೋದನೆ ಪಡೆಯಬೇಕಾಗಿದೆ.
ಲಕ್ಷ್ಮಿ ನಾರಾಯಣ್ ಮಿತ್ತಲ್ ಅವರು ರಾಜಸ್ಥಾನದ ಸದುಲ್ಪುರ್ ಗ್ರಾಮದವರು. ಈ ಖರೀದಿಯು ಅವರಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದೆ. ಅವರು ಕ್ರಿಕೆಟ್ ಅಭಿಮಾನಿಯಾಗಿದ್ದು, “ರಾಜಸ್ಥಾನ್ ರಾಯಲ್ಸ್ ತಂಡವನ್ನು ಪಡೆಯುವುದು ನನ್ನ ಕನಸು” ಎಂದು ಹೇಳಿದ್ದಾರೆ.
ನನಗೆ ಕ್ರಿಕೆಟ್ ಅಂದರೆ ಇಷ್ಟ, ನನ್ನ ಕುಟುಂಬ ಕೂಡ ರಾಜಸ್ಥಾನ ಮೂಲದವರು. ಹಾಗಾಗಿ ಈ ಫ್ರಾಂಚೈಸಿಯ ಭಾಗವಾಗುವುದಕ್ಕಿಂತ ಭಾಗ್ಯ ಮತ್ತೊಂದಿಲ್ಲ. ನಾನು ಬಾಲ್ಯದಲ್ಲಿ ಕ್ರಿಕೆಟ್ ಆಡುತ್ತಿದ್ದೆ, ಅಂದಿನಿಂದ ಇಲ್ಲಿಯವರೆಗೂ ಒಬ್ಬ ಅಭಿಮಾನಿಯಾಗಿ ಕ್ರಿಕೆಟ್ ಆನಂದಿಸುತ್ತಾ ಬಂದಿದ್ದೇನೆ. ತಂಡದಲ್ಲಿ ಶ್ರೇಷ್ಠ ಆಟಗಾರರಿದ್ದಾರೆ. ಅತ್ಯುತ್ತಮ ಯುವ ಬಳಗವನ್ನು ಹೊಂದಿದೆ. ನಾನು ಈ ತಂಡದ ಭಾಗವಾಗಲು ಹಾಗೂ ಮೈದಾನದಲ್ಲಿ ತಂಡವನ್ನು ಅಭಿಮಾನಿಗಳೊಂದಿಗೆ ಚಿಯರ್ ಮಾಡಲು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ. ಅವರ ಪುತ್ರ ಅದಿತ್ಯ ಮಿತ್ತಲ್ ಮತ್ತು ಪುತ್ರಿ ವನಿಶಾ ಮಿತ್ತಲ್-ಭಾಟಿಯಾ ಕೂಡ ಈ ತಂಡದ ಬೋರ್ಡ್ನಲ್ಲಿ ಇರಲಿದ್ದಾರೆ.
ಆದಾರ್ ಪೂನಾವಾಲಾ ಅವರು, ಆದಿತ್ಯಾ ಮಿತ್ತಲ್ ಜತೆಗೆ ಪಾಲುದಾರನಾಗಿ ರಾಜಸ್ಥಾನ್ ರಾಯಲ್ಸ್ ತಂಡದ ಮೇಲೆ ಹೂಡಿಕೆ ಮಾಡಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ. ರಾಜಸ್ಥಾನ್ ರಾಯಲ್ಸ್ ಐಪಿಎಲ್ನಲ್ಲಿ ಒಂದು ಶ್ರೇಷ್ಠ ತಂಡವಾಗಿದ್ದು, ಅದ್ಭುತ ಪರಂಪರೆಯನ್ನ ಹೊಂದಿದೆ. ನಾನೂ ಕೂಡ ಈ ತಂಡದ ಬೆಳವಣಿಗೆಗೆ ಬೆಂಬಲ ನೀಡಲು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.
2ನೇ ಅತಿ ದೊಡ್ಡ ಡೀಲ್
ರಾಜಸ್ಥಾನ್ ರಾಯಲ್ಸ್ನ ಈ 1.63 ಡೀಲ್ ಐಪಿಎಲ್ ತಂಡಗಳ ಮೌಲ್ಯ ಹೆಚ್ಚಾಗುತ್ತಿರುವುದನ್ನು ತೋರಿಸುತ್ತದೆ. ಇದು ಐಪಿಎಲ್ ಇತಿಹಾಸದ 2ನೇ ದೊಡ್ಡ ಡೀಲ್ ಆಗಿದೆ. ಇದಕ್ಕೂ ಮುಂಚೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 1.78 ಬಿಲಿಯನ್ ಡಾಲರ್ಗೆ ಮಾರಾಟವಾಗಿತ್ತು. ಆರ್ಸಿಬಿಯನ್ನ ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಹಾಗೂ ಬೋಲ್ಟ್ ವೇಂಚರ್ಸ್ ಹಾಗೂ ಬ್ಲಾಕ್ಸ್ಟೋನ್ ಕಂಪನಿಗಳ ಸಹಯೋಗದಲ್ಲಿ ಸುಮಾರು 16,700 ಕೋಟಿಗೆ ಖರೀದಿಸಿದೆ.
ಈ ಸೀಸನ್ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಉತ್ತಮ ಪ್ರದರ್ಶನ ನೀಡುತ್ತಿದೆ. 15 ವರ್ಷದ ಯಂಗ್ಸ್ಟರ್ ವೈಭವ್ ಸೂರ್ಯವಂಶಿ ತಂಡವನ್ನ ಪ್ಲೇ ಆಫ್ ಹತ್ತಿರಕ್ಕೆ ಬರಲು ಪ್ರಮುಖ ಪಾತ್ರವಹಿಸಿದ್ದಾರೆ. ರಿಯಾನ್ ಪರಾಗ್ ನೇತೃತ್ವದಲ್ಲಿ ಯುವ ತಂಡವೂ ಅದ್ಭುತ ಪ್ರದರ್ಶನ ತೋರಿ 10 ಪಂದ್ಯಗಳಲ್ಲಿ 6 ಜಯ, 4 ಸೋಲುಗಳೊಂದಿಗೆ 12 ಅಂಕ ಪಡೆದು 4ನೇ ಸ್ಥಾನದಲ್ಲಿದೆ.