newsics.com/ನ್ಯೂಸಿಕ್ಸ್
ದೊಡ್ಡಬಳ್ಳಾಪುರ: ಮೊದಲ ಪತ್ನಿಗೆ ವಂಚಿಸಿ ಎರಡನೇ ಮದುವೆಯಾಗಲು ಮುಂದಾಗಿದ್ದ ವರನೊಬ್ಬನ ಮದುವೆಯನ್ನು ಗರ್ಭಿಣಿ ಪತ್ನಿ ಮಂಟಪಕ್ಕೇ ಬಂದು ನಿಲ್ಲಿಸಿರುವ ಘಟನೆ ದೊಡ್ಡಬಳ್ಳಾಪುರ ನಗರದ ಬಸವ ಭವನದಲ್ಲಿ ನಡೆದಿದೆ.
ಕೇರಳ ಮೂಲದ ಮಹಿಳೆಯನ್ನು ಪ್ರೀತಿಸಿ ಕಳೆದ ಒಂದು ವರ್ಷದ ಹಿಂದೆಯಷ್ಟೇ ಕುಮಾರ್ ಎಂಬ ಯುವಕ ವಿವಾಹವಾಗಿದ್ದ. ಈಗ ಕುಮಾರ್ ಪತ್ನಿ ಏಳು ತಿಂಗಳ ಗರ್ಭಿಣಿ. ಆದರೆ ಮನೆಯವರ ಒತ್ತಡಕ್ಕೆ ಮಣಿದ ಕುಮಾರ್, ತನ್ನ ಮೊದಲ ಮದುವೆಯ ವಿಷಯ ಮರೆಮಾಚಿ ಮತ್ತೊಬ್ಬ ಯುವತಿಯೊಂದಿಗೆ ಎರಡನೇ ಮದುವೆಯಾಗಲು ಸಿದ್ಧತೆ ನಡೆಸಿದ್ದ.
ವಿಶೇಷವೆಂದರೆ ತಾನು ಎರಡನೇ ಮದುವೆಯಾಗುತ್ತಿರುವ ವಿಷಯವನ್ನು ಸ್ವತಃ ಕುಮಾರ್ ಅವರೇ ತಡರಾತ್ರಿ ಮೊದಲ ಪತ್ನಿ ಕರೆ ಮಾಡಿ ತಿಳಿಸಿದ್ದ. ಮನೆಯವರು ಬಲವಂತವಾಗಿ ಈ ಮದುವೆ ಮಾಡಿಸುತ್ತಿದ್ದಾರೆ ಎಂದು ಆಕೆ ಬಳಿ ಅಸಹಾಯಕತನ ವ್ಯಕ್ತಪಡಿಸಿದ್ದ ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆಯೇ ಕಂಗಾಲಾದ ಗರ್ಭಿಣಿ ರಾತ್ರೋರಾತ್ರಿ ಕೇರಳದಿಂದ ದೊಡ್ಡಬಳ್ಳಾಪುರಕ್ಕೆ ಧಾವಿಸಿದ್ದಾರೆ.
ಇಂದು (ಮೇ 3) ಬೆಳಗ್ಗೆ ಮದುವೆ ಶಾಸ್ತ್ರಗಳು ಆರಂಭವಾಗುವ ಮುನ್ನವೇ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟ ಕುಮಾರ್ ಪತ್ನಿ, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತಪಡಿಸಿ ಮದುವೆಯನ್ನು ತಡೆದಿದ್ದಾರೆ.
ದೊಡ್ಡಬಳ್ಳಾಪುರ ನಗರ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ತಕ್ಷಣವೇ ವರ ಕುಮಾರ್‌ನನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ. ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವರನನ್ನು ವಶಕ್ಕೆ ಪಡೆದಿದ್ದು, ಮೊದಲ ಮದುವೆಯ ದಾಖಲೆಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ವರ ಈಗ ಕಂಬಿ ಎಣಿಸುವಂತಾಗಿದೆ.
https://www.newsics.com/2026/05/03/mother-attempts-suicide-by-poisoning-two-children/